Wednesday, March 6, 2019

ಭಾಷಾಭಿಮಾನ ಕೆರಳಿದಾಗ ಏನು ಕುಡಿಯಬೇಕು?

ಭಾಷಾಭಿಮಾನ ಕೆರಳಿದಾಗ ಏನು ಕುಡಿಯಬೇಕು?


ಬೆಂಗಾವಲೂರಿನ ಪಂಚತಾರಾ ಹೊಟೆಲೊಂದರಲ್ಲಿ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾಷಣ ಮಾಡುತ್ತಿದ್ದರು. ಹೊರಗೆ ಜೋರಾಗಿ ಮಳೆಯಿದ್ದರೂ ಒಳಗೆ ವಾತ ಅನಾನುಕೂಲಿತ ಎಸಿ.
ಅಂಥಾದ್ದರಲ್ಲಿ ನಾವು ಬಿಸಿ ಬಿಸಿ ಸೂಪು ಕುಡಿಯುತ್ತ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆವು.
``ಭಾರತದ ಎಲ್ಲ ಭಾಷೆಗಳ ತಾಯಿ ಸಂಸ್ಕೃತ. ಎಲ್ಲಾ ಭಾಷೆಗಳ ಮೇಲೆ ಇದರ ಪ್ರಭಾವ ತಪ್ಪಿಸಿಕೊಳ್ಳಲಾರದಷ್ಟು ಇದೆ,’’ ಅಂತ ಹೇಳಿದರು. ನಾವು ಸೂಪಿನ ಬಟ್ಟಲನ್ನು ಕೆಳಗಿಟ್ಟು ಚಪ್ಪಾಳೆ ಹೊಡೆದೆವು. ಅಂತಹ ಚಳಿಯಲ್ಲೂ ನಮ್ಮ ಭಾಷಾಭಿಮಾನ ಸಣ್ಣಗೆ ಕೆರಳುತ್ತಿತ್ತು.

ಆ ನಂತರ ಸ್ಥಳೀಯ ಪ್ರತಿಭೆಯೊಬ್ಬರು ಭಾಷಣ ಆರಂಭಿಸಿದರು. ``ಕನ್ನಡದ ಶಬ್ದಕೋಶದಲ್ಲಿ ಶೇಕಡಾ 98 ರಷ್ಟು ಸಂಸ್ಕೃತ ಶಬ್ದಗಳಿವೆ’’, ಎಂದರು. ಇವರ ಮಾತಿಗೆ ಚಪ್ಪಾಳೆ ಹೊಡೆಯಬೇಕೋ, ಸುಮ್ಮನೇ ಸೂಪು ಕುಡಿಯಬೇಕೋ ಎಂದುಕೊಳ್ಳುತ್ತಿದ್ದಂತೆ ಸಂಪಾದಕರ ಫೋನು ಬಂತು. ``ಈ ಮನುಷ್ಯ ತಾನೂ ನಿದ್ದೆ ಮಾಡುವುದಿಲ್ಲ, ಬೇರೆಯವರಿಗೂ ಮಾಡಿಸಿಕೊಡುವುದಿಲ್ಲ’’ ಅಂತ ಅಂದುಕೊಳ್ಳುತ್ತಾ ಹೊರಗೆ ಹೋಗಿ, ಫೋನು ತೊಗೊಂಡೆ.

ನಮ್ಮ ಕನ್ನಡದ ಕಲಿಗಳು ಮೆಟ್ರೊ ರೈಲಿನಲ್ಲಿದ್ದ ಹಿಂದಿ ಫಲಕಗಳನ್ನು ಆವೇಶ-ಆಕ್ರೋಶದಿಂದ ಕಿತ್ತೊಗೆದ ಹಿನ್ನೆಲೆಯಲ್ಲಿ ಸಂಪಾದಕರು ಫೋನು ಮಾಡಿದ್ದರು.

``ಎನ್ರೀ ರೀ, ಏಗಿದ್ದೀರಿ? ಈ ಉಟ್ಟು ಓರಾಟಗಾರರು ಎಲ್ಲಾ ನಮ್ಮ ಫ್ರೆಂಡ್ಸೂ. ಅವರು ಈ ಇಂದೀ- ಹುರ್ದು- ಪರ್ಷಿಯನ್ ಪದಗಳನ್ನು ಭಳಸದೇ ಭದುಕಬೇಕು ಅಂತಾ ಡಿಸೈಡು ಮಾಬಿಟ್ಟವ್ರೇ. ಹಂಥವರೆಲ್ಲಾ ಹೇನು ಮಾಡಬೌದು ಆಗೂ ಹೇನು ಮಾಡಬಾರದು ಎನ್ನುವುದರ ಬಗ್ಗೆ ಒಂದು ಕೆಲವು ಡೂಸು ಹಾಗೋ ಡೋಂಟ್ಸು ಬರೆದು ಕೊಡಿ’’ ಅಂತ ಕೇಳಿದರು. ನನಗೆ ಇಲ್ಲವೆನ್ನಲು ಆಗಲಿಲ್ಲ.
`ಹೌ ಟು ಸೇ ನೋ ವೆನ್ ಯು ವಾಂಟ್ ಟು ಸೇ ಎಸ್’ ಎನ್ನುವ ಪುಸ್ತಕ ಓದೋಣ ವೆಂದರೆ ಆಕೃತಿ ಗುರು ಅವರು ಅದನ್ನು ನನಗಿನ್ನೂ ಕಳಿಸಿಯೇ ಇಲ್ಲ.

ಎಲ್ಲ ವರದಿಗಾರರೂ ಯೋಚಿಸುವಂತೆ, ``ನಾಳೆ- ನಾಡಿದ್ದು ಬರೆದರಾಯಿತು, ಯಮನ ದೂತರು ಬಂದು ಕೇಳಿದಾಗ ಕೊಟ್ಟರಾಯಿತು,’’ ಎಂದುಕೊಂಡೆ. ತಕ್ಷಣಕ್ಕೆ ಒಂದಿಷ್ಟು ಪಾಯಿಂಟು ಮಾಡಿಟ್ಟುಕೊಂಡೆ. ಅವು ಇಲ್ಲಿವೆ.
ಇಂಥವರು ಎದ್ದ ಕೂಡಲೇ ಕಾಫಿ ಕುಡಿಯಬಾರದು. ಚಹಾನೂ ನಿ಼ಷಿದ್ಧ. ಯೋಗೇಶ ಮಾಸ್ಟರ್ ಅವರ ರಾಜಮಾರ್ಗದಲ್ಲಿ ನಡೆಯುತ್ತಾ ತಾಮ್ರದ ಗಿಂಡಿಯಲ್ಲಿ ಸಾಸಿವೆ ನೀರು ಕುಡಿಯಬೇಕು. ಅದಕ್ಕೆ ಅಜವಾನ- ಜೀರಿಗೆ, ಲವಂಗ, ಇತ್ಯಾದಿ ಗಳನ್ನು ಹಾಕಬಾರದು.

ಹೆಂಡತಿ ಹೇಳಿದಳೆಂದು ತಾಜಾ ತರಕಾರಿ ಖರೀದಿ ಮಾಡಲಿಕ್ಕೆ ಹೋಗಬಾರದು.
ತಾನು ತರದೇ ಇದ್ದರೇನು, ಇವರು ತರಲಿ ಅಂತೇಳಿ ಹೆಂಡತಿ ಮಕ್ಕಳನ್ನು ಬಾಜಾರಿಗೆ ಕಳಿಸಬಾರದು. ಕಳಿಸಿದರೂ ರೂಪಾಯಿ, ಪೈಸೆ, ವಗೈರೆ ಕೊಡಬಾರದು. ಕೊಟ್ಟರೂ ಚಿಲ್ಲರೆ ವಾಪಸ್ ಕೇಳಬಾರದು. ಸುಮ್ಮನೇ ಶಾರುಖ್ ಖಾನನ ಮಾತು ಕೇಳಿ ಆನುಲೈನಿನಲ್ಲಿ ಕೊಂಡುಕೊಳ್ಳುವುದು ಒಳಿತು.
ಕ್ಯಾಷ್ ಲೆಸ್ ಇಂಡಿಯಾ ಗೆ ಜೈ ಅನ್ನಬೇಕು. ಜಿಂದಾಬಾದ್ ಅನ್ನಬಾರದು.

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಅಂತ ಬಂದ್ ಮಾಡಬಾರದು. ಹರತಾಲಕ್ಕೆ ಇಳಿಯಬಾರದು. ಇಂಟರ್ ನೆಟ್ಟಿನಲ್ಲಿ ಆಗಾಗ ಹುಟ್ಟುವ ಹ್ಯಾಷ್ ಟ್ಯಾಗಗಳಿಗೆ ಲೈಕ್ ಮಾಡಿ ಸಂತೋಷ ಪಡಬೇಕು. ನಮ್ಮಂತಹ ಹತ್ತು ಜನರಿಗೆ ಹೇಳಿಕೊಂಡು ಪ್ರೊಫೈಲು ಚಿತ್ರ ಬದಲಿಸುತ್ತಿರಬೇಕು.

ಯಾರಾದರು ನಿಮ್ಮ ವಿಳಾಸ ಕೇಳಿದರೆ, ನಿಮ್ಮದು ಯಾವ ಗಲ್ಲಿ, ಯಾವ ಚೌಕು, ಯಾವ ತಾಲೂಕು, ಯಾವ ಜಿಲ್ಲೆ, ಕಸಬಾ ಹೋಬಳಿ ಅಂತೆಲ್ಲಾ ಹೇಳ್ತಾಕೂಡಬಾರದು.

ಅಲ್ಲಿ ಧಾರಾಳವಾಗಿ ಮನೆ ಕಟ್ಟಬಹುದು. ಆದರೆ ಅದನ್ನು ಯಾವ ಕಾರಣಕ್ಕೂ ಬಾಡಿಗೆ ಕೊಡಬಾರದು. ಕೊಟ್ಟರೂ ಪುಕ್ಕಟೆ ಆಗಿ ಕೊಡಬಾರದು, ಹಾಗೆಂದು ಅದಕ್ಕೆ ಇಂತಿಷ್ಟು ಬಾಡಿಗೆ ಎಂದು ಬಾಡಿಗೆದಾರರಿಂದ ರೊಕ್ಕ ವಸೂಲು ಮಾಡಬಾರದು.

ಆ ಮನೆಯಲ್ಲಿ ಮೇಜು, ಕುರ್ಚಿ, ಕಪಾಟು, ತಿಜೋರಿ, ದಿವಾನ, ಬೆಡ್ ರೂಮಿನಲ್ಲಿ ಚಾದರ, ಬಾತು ರೂಮಿನಲ್ಲಿ ಸಾಬೂನು, ಇವು ಯಾವುವೂ ಇರಬಾರದು. ಒಂದು ಹೋಲ್ಡಾಲು, ಒಂದೆರಡು ಲೋಡುಗಳು ಇರಬಹುದು. ಹುಳಿಬಂದ ಹಾಲಿನಲ್ಲಿ ಮೀಸೆ ಬೋಳಿಸಬಹುದು. ಆದರೆ ದಾಡಿ ಮಾಡಿಕೊಳ್ಳಬಾರದು. ಬೇವಿನ ಕಡ್ಡಿಯಿಂದ ಎಷ್ಟಾದರೂ ಹಲ್ಲು ತಿಕ್ಕಬಹುದು.

ಜೀವನದಲ್ಲಿ ಯಾವುದೇ ಕೆಲಸ ಶುರು ಮಾಡಬಾರದು. ಆರಂಭಿಸಿ, ಮುಕ್ತಾಯ ಮಾಡಬಹುದಷ್ಟೇ. ಯಾವ ತರಬೇತಿಯನ್ನೂ ಪಡೆಯಬಾರದು. ತರಬೇತಿಗಾಗಿ ಸರಕಾರವನ್ನೂ ಅವಲಂಬಿಸಬಾರದು, ಖಾಸಗಿಯವರ ಕಡೆಗೂ ಹೋಗಬಾರದು.

ಮನೆಯಲ್ಲಿ ಗಣಪತಿ ಕೂಡಿಸಬಹುದು. ಗಲ್ಲಿಯಲ್ಲಿ ಕೂಡಿಸಬಾರದು. ಊರಿನಲ್ಲಿ ರಾಜ್ಯೋತ್ಸವ ಮಾಡಬಹುದು. ಆದರೆ ಇಂಥದಕ್ಕೆಲ್ಲಾ ಚಂದಾ ಎತ್ತಬಾರದು. ಮನೆಯಲ್ಲಿ ಗಂಡು ಮಕ್ಕಳ ಜವಳ ಮಾಡಬಹುದು. ಅವರಿಗೆ ಜುಲುಪಿ ಬಿಡಿಸಬಾರದು. ಮಕ್ಕಳಿಗೆ `ಸಾಯಿ ರಾಮ’, `ಮಂಜು ಸಾಯಿನಾಥ’, `ಸಾಯಿ ಸತ್ಯನಾರಾಯಣ’ ಅಂತೆಲ್ಲಾ ಹೆಸರಿಡಬಾರದು.

ಮಕ್ಕಳನ್ನು ಸರಕಾರಿ ಶಾಲೆಗೂ ಹಾಕಬಾರದು, ಖಾಸಗಿ ಶಾಲೆಗೂ ಹಾಕಬಾರದು. ಅವರು ಡೈರೆಕ್ಟಾಗಿ ಕಾಲೇಜಿಗೆ ಹೋಗಬೇಕು. ಕಾಲೇಜಿನಲ್ಲಿ, ಯುನಿವರ್ಸಿಟಿಯಲ್ಲಿ ಯಾರಿಗು `ಐ ಲವ್ ಯೂ’ ಅಂತನೋ, `ಪಿಚ್ಚರ್ ನೋಡೋಣ’, `ಕ್ಲಾಸಿನ ನಂತರ ಲಾಲ್ ಬಾಗಿಗೆ ಹೋಗೋಣ’ ಅಂತೆಲ್ಲಾ ಚೀಟಿ ಬರೆಯಬಾರದು.

ಯಾವ ನೌಕರಿಯೂ ಮಾಡಬಾರದು, ನೌಕರಿಗೆಂತ ಕಚೇರಿಗೆ ಹೋಗಬಾರದು. ಹೋದರೂ ಒಂದೇ ಹಾದಿಯಲ್ಲಿ ಹೋಗಬಾರದು. ಒಂದು ದಿನ ಹೋದ ದಾರಿಯನ್ನು ಮರು ದಿನ ಬದಲು ಮಾಡಬಾರದು.

ಕಚೇರಿಯಲ್ಲಿ ಜಗಳ ಮಾಡಬಾರದು. ಮಾಡಿದರೂ ಸಂಭಾಳಿಸಿಕೊಂಡು ಹೋಗಬಾರದು. ರಜೆ ಹಾಕಬಾರದು, ರಾಜಿನಾಮೆ ಕೊಡಬಾರದು. ನಾಕರಿ ಬಿಟ್ಟು ಯಾವುದಾದರೂ ಧಂಧೆ ಮಾಡಿಗೀಡಿಯಾರು ಮತ್ತೆ. ಏನು ಮಾಡಿದರೂ ಆಮದು, ರಫ್ತು ಮಾಡಬಾರದು, ಫಾಯದೆ – ಲುಕ್ಸಾನದ ವಿಚಾರ ಮಾಡಬಾರದು. ದುಡ್ಡು ಗಳಿಸಿದರೂ ತಿಜೋರಿಯಲ್ಲಿ ಇಡಬಾರದು. ನಿಜ ಹೇಳಬೇಕೆಂದರೆ, ಜೀವನದಲ್ಲಿ ಜಮಾ -ಖರ್ಚು ಏನೂ ಮಾಡಬಾರದು.

ಪಂಚಾಂಗ ನೋಡಬಹುದು. ಆದರೆ ತೇಜಿ – ಮಂದಿ ಲೆಕ್ಕ ನೋಡಬಾರದು. ಸಿ ಆಂಡ್ ಎಫ್ ಎಜೆಂಟ್ ಆಗಬಹುದು, ಆದರೆ ಯಾವುದೇ ಸಾಮಾನು ತರಬಾರದು, ಗೋದಾಮಿನಲ್ಲಿ ಮಾಲು ಇಳಿಸಬಾರದು,

ಅತಿಥಿಗಳು ಬಂದರೆ ಮೇಜವಾನಿ ಮಾಡಬಾರದು. ಕಷಾಯ -ಪಾಯಸ – ಪಾನಕ ನೀಡಿ ಸಾಗಹಾಕಬೇಕು.
ರೊಟ್ಟಿ, ಚಪಾತಿ, ಪೂರಿ, ಸಾಗು, ಚಟ್ನಿ, ಸಾಂಬಾರು, ದಾಲ್ – ಸಬ್ಜಿ, ಭಜಿ, ಭಾಜಿ, ಬಜ್ಜಿ, ಖೀರು- ಕೂರ್ಮಾ, ಮೆಣಸಿನಕಾಯಿ ಬಜ್ಜಿ, ಪುಲಾವು, ಬಿರಿಯಾನಿ ಇವು ಯಾವನ್ನೂ ಮಾಡಬಾರದು. ಇಡ್ಲಿ ಮಾಡಬಹುದು, ವಡಾ ಮಾಡಬಾರದು. ದಹೀ ವಡಾ- ತಹಿರ್ ವಡಾ ಗಳನ್ನು ಮಾಡಬಾರದು - ತಿನ್ನಬಾರದು.  

ಯಾವ ಅಡಿಗೆಗೂ ಮಸಾಲೆ ಹಾಕಬಾರದು. ನಮ್ಮಜ್ಜಿ ಮಾಡಿದಂತೆ ಒಂದೆರಡು ಕಾಳು ಉಪ್ಪು- ಮೆಣಸಿನಕಾಳು ಹಾಕಿ ಅನ್ನ- ಗಂಜಿ ಮಾಡಿಕೊಳ್ಳಬಹುದು. ಅದು ಆರೋಗ್ಯಕ್ಕೂ ಒಳ್ಳೆಯದು. ಡೌಟು ಬಂದರೆ ರುಜುತಾ ದಿವೇಕರ್ ಅವರನ್ನು ಕೇಳಬಹುದು.

ದಿನಾಲೂ ಮನೆಯಲ್ಲಿ ಮ್ಯಾಗಿ- ಓಟ್ಸು ತಿಂದುಕೊಂಡು ಇರಬಹುದೇನೋ. ಬೆಲ್ಲದ ನೀರಿನ ಪಾನಕ ಕುಡಿಯಬಹುದು.  ಗೋವಿನ ಹಾಲು, ಮೂತ್ರ, ಸೆಗಣಿ ಮಾತ್ರ ಯಾವುದೇ ಕಾರಣಕ್ಕೂ ಬಳಸಬಾರದು. ಜ್ವರ ಕೆಮ್ಮ ನೆಗಡಿ ಬಂದರೆ ಮತ್ತೆ ಅಜ್ಜಿಯ ಕಷಾಯ ಕುಡಿಯಬೇಕು. ದವಾಖಾನೆಗೆ ಹೋಗಬಾರದು. ಹೋದರೂ ಔಷಧಿ ಕುಡಿಯಬಹುದು. ಗುಳಿಗೆ ನುಂಗಬಾರದು. 

ನಾವೆಲ್ಲ ಕಂಠೀ ಹಾರ ಹಾಕಬಹುದು, ಎಲ್ಲ ಬೆರಳುಗಳಿಗೆ ಉಂಗುರು ಹಾಕಬಹುದು. ಆದರೆ ಅಂಗುಷ್ಟಕ್ಕೆ ಉಂಗುರ ಹಾಕಬಾರದು. ಸೀರೆ ಉಟ್ಟುಕೊಳ್ಳಬಾರದು, ರೇಷಿಮೆ ಸೀರೆಯಂತೂ ಮೊದಲು ಉಡಬಾರದು.
ಷರಟು, ಪ್ಯಾಂಟು ಧರಿಸಬಹುದು. ಷರಾಯಿ, ಜುಬ್ಬಾ, ಪೈಜಾಮಾ, ಲಂಗ, ಲುಂಗಿ, ಲಂಗೋಟಿ ಇವು ಯಾವುದನ್ನೂ ಧರಿಸಬಾರದು. ಯಾರಿಗೂ ಟೋಪಿ ಹಾಕಬಾರದು, ಹಾಕಿಸಿಕೊಳ್ಳಬಾರದು.

ಯಾವ ಸರಕಾರಿ ಕಚೇರಿಗೂ ಹೋಗಬಾರದು. ತಹಶೀಲ್ದಾರ್ ರನ್ನು ಭೇಟಿ ಆಗಬಾರದು, ತಾಲೂಕು ಅಧಿಕಾರಿಗೆ ಲಂಚ ಕೊಡಬಾರದು. `ನಮ್ಮ ಜಮೀನನ್ನು ಮೋಜಣಿ ಮಾಡಬೇಕಾಗಿದೆ’ ಎಂದು ಜಿಲ್ಲಾಧಿಕಾರಿಗೆ ಅರ್ಜಿ ಕೊಡಬಾರದು. `ನಮ್ಮ ಖಾತಾ ಬದಲಾವಣೆ ಮಾಡಿ’, `ಪಟ್ಟಾ ಕಾಪಿ ಕೊಡಿ’, `ನಮ್ಮ ಜಮೀನನ್ನು ಬಿನ್ ಖೇತಿ ಮಾಡಿಕೊಡಿ’ ಅಂತೆಲ್ಲಾ ಪತ್ರ ಬರೆಯಬಾರದು. 

ಸರಕಾರಿ ಖಜಾನೆಗೆ ಹೋಗಬಾರದು. ಅಲ್ಲಿ ಹೋಗಿ `ನನಗೆ ಪಗಾರ ಬಂದಿಲ್ಲ’ `ಆ ಭತ್ತೆ ಬಂದಿಲ್ಲ, ಈ ಭತ್ತೆ ಸಿಕ್ಕಿಲ್ಲ’, ಅಂತೆಲ್ಲಾ ದೂರು ನೀಡಬಾರದು. ಅಥವಾ `ಹೋದ ವರ್ಷದ ಪೇಪರ್ ವ್ಯಾಲ್ಯುವೇಷನ್ನಿನಲ್ಲಿ ನನಗೆ ನೂರು ರಾಪಾಯಿ ಕಡಿಮೆ ಬಂದಿದೆ. ನನ್ನ ಖಾತೆಗೆ ಜಮಾ ಮಾಡಿ ಅಂತೆಲ್ಲ ಕೇಳಬಾರದು. ಕೊನೆಯತನಕ ಬಡವರಾಗಿರಲು ಅಡ್ಡಿ ಇಲ್ಲ. ಯಾವ ಕಾರಣಕ್ಕೂ ಸಾಹುಕಾರರಾಗಬಾರದು.

ಸರಕಾರಕ್ಕೆ ಯಾವ ಪತ್ರ ವನ್ನೂ ಬರೆಯಬಾರದು. ಬರೆದರೂ ಆ ಪತ್ರವನ್ನು `ಮೆಹರಬಾನ್ ಸಾಹೇಬರಿಗೆ’, `ಖಾವಂದರಿಗೆ’, ಅಂತೆಲ್ಲಾ ಶುರು ಮಾಡಬಾರದು. ``ನಮ್ಮದು ಐದು ಎಕರೆ, ಮೂರು ಗುಂಟೆ ಜಮೀನು ಇದ್ದು, ಇದರ ಜಮಾ ಬಂದಿ ಮಾಡಬೇಕು, ಅದರ ಸುತ್ತ ಚಕ್ಕ ಬಂದಿ ಮಾಡಬೇಕು, ಐದು ಮಂದಿ ಸಾಕ್ಷಿಗಳನ್ನು ಕರೆದು ಪಂಚನಾಮೆ ಮಾಡಬೇಕು’’ ಎಂದೆಲ್ಲಾ ಕೇಳಬಾರದು. ``ನಮ್ಮೂರಿನಲ್ಲಿ ನಮ್ಮ ರೈತನ ಬಡ ಕುಟುಂಬದವರು ಕೆಲವು ಎಕರೆ ಜಂಗಲ್ ಭೂಮಿಯನ್ನು ಬಗೈರ್ ಹುಕುಂ ಸಾಗುವಳಿ ಮಾಡುತ್ತಿದ್ದು ಅದನ್ನು ಖಾಸಾ ಪಹಣಿ ಮಾಡಿಕೊಡಬೇಕಾಗಿ ವಿನಂತಿ’’ ಎಂದೆಲ್ಲಾ ಬೇಡಿಕೊಳ್ಳಬಾರದು.

``ನಮ್ಮೂರಿಗೆ ರಸ್ತೆ ಇಲ್ಲ. ರಸ್ತೆ ಮಾಡಿಕೊಡಿ’’ ಎಂದು ವಿನಂತಿ ಮಾಡಬಾರದು. ``ನಮ್ಮೂರಿನ ಗೈರಾಣ-ಗೌಠಾಣ ಜಮೀನು ಯಾರಿಗೋ ಪರಭಾರೆ ಆಗಿದೆ. ಅದನ್ನು ಉಳಿಸಿ’’ ಎಂದು ಕೇಳಿ ಕೊಳ್ಳಬಾರದು.

ದಿವಾಣಿ ನ್ಯಾಯಾಲಕ್ಕೆ ಹೋಗಿ ವಕೀಲರನ್ನು ಭೇಟಿ ಆಗಬಾರದು. ಮುನ್ಸೀಫರ ಮುಂದೆ ಹೋಗಿ ಅವರು ನಿಮ್ಮ ಪರವಾಗಿ ಮೊಕದ್ದಮೆ ನಡೆಸಲು ವಕಾಲತ್ ನಾಮಾ ಕೊಡಬಾರದು. `ನಮ್ಮ ಜಾಗವನ್ನು ಇಂಥಿಂಥವರು ಕಬ್ಜಾ ಮಾಡುತ್ತಿದ್ದಾರೆ, ಅದನ್ನು ಖುಲ್ಲಾ ಮಾಡಿಸಿಕೊಡಿ’ ಅಂತ ಕೇಳಿಕೊಳ್ಳಬಾರದು. ನ್ಯಾಯಾಧಿಶ ಸಾಹೇಬರು ಫಿರ್ಯಾದಿಯ ಮನೆಗೆ ಬೇಲೀಫರನ್ನು ಕಳಿಸಬಹುದು. ಜವಾನನ್ನು ಕಳಿಸಬಾರದು.

ನಿಮಗೆ ಏನಾದರೂ ಸಮಸ್ಯೆ ಬಂತು ಅಂತ ಪೋಲಿಸ್ ಠಾಣೆಗೆ ಹೋಗಬಾರದು. ಅಲ್ಲಿಯ ಚೌಕೀದಾರರನ್ನೋ, ಫೌಜುದಾರರನ್ನೋ, ದಫೇದಾರರನ್ನೋ ಭೇಟಿ ಆಗಬಾರದು. `ಇಂಥವರು ಖೂನಿ ಮಾಡಿದ್ದಾರೆ,’ `ಇಂಥ ಡಾಕುಗಳು ಧಾಂಧಲೆ ಮಾಡಿದ್ದಾರೆ’, `ನಮ್ಮ ಊರಿನ ನಾಕಾದಲ್ಲಿ ಗದ್ದಲ ಹಾಕಿದ್ದಾರೆ,’ ``ನಮ್ಮ ಊರಿನ ಹನುಮಂತ ದೇವರ ಕೂಟಿನಲ್ಲಿ ಕಾನೂನು ಭಂಗ ಮಾಡಿದ್ದಾರೆ’, `ಇಂಥವರ ವಿರುದ್ಧ ಮೊಕದ್ದಮೆ ದಾಖಲಿಸಿ’ ಅಂತೆಲ್ಲಾ ಅರ್ಜಿ ಕೊಡಬಾರದು.

ಯಾರಿಗಾದರೂ ಬೈಯ್ಯುವಾಗ ಕೇರ್ ಫುಲ್ ಆಗಿರಬೇಕು. `ಯಾಕೋ ನನ್ ಮಗನೆ, ಮೈಯಲ್ಲಿ ಹುಷಾರು ಇಲ್ವಾ?’ ಅಂತ ಅನ್ನಬಾರದು. ` ಭಾರಿ ದೌಲತ್ತು ಆ ನನ್ ಮಗನಿಗೆ’ ಅನ್ನ ಬಾರದು. `ಭಾರಿ ದಿಮಾಕು ಬಿಡ್ ಕಣಯ್ಯಾ ಅವಂದು’ ಅನ್ನಬಾರದು. `ಹಲ್ಕಾ ನನ್ ಮಗನೆ,’ ಅಂತಲೂ ಬೈಯಬಾರದು. `ನಾಲಾಯಕ್’ ಅನ್ನಬಾರದು. ಭಾಡಕೋ, ಭಢವ, ಭೋ…. ಅಂತೆಲ್ಲಾ ಅನ್ನಲೇ ಬಾರದು. `ನೀನು ಒಬ್ಬ ಮೂರ್ಖ ಶಿಖಾಮಣಿ’, `ಅವಿವೇಕಿ’, `ಅಸಂಬದ್ಧ ಮಾತಾಡುವವನು,’ `ಹಿಂಸಾ ಪ್ರವೃತ್ತಿಯವನು’, `ಕೆಲಸಕ್ಕೆ ಬರಲಾರದವನು’ ಅಂತೆಲ್ಲಾ ಅನ್ನಬಹುದೇನೋ.

ಚುನಾವಣೆಗೆ ನಿಲ್ಲಬಾರದು. ``ಎಂಥಾ ಕೇಡುಗಾಲವಿದು, ನಮ್ಮ ಮತಕ್ಕೆ ಯಾವುದೇ ಕಿಮ್ಮತ್ತು ಇಲ್ಲ’’ ಎಂದು ಹಳಹಳಿಸಿದರೂ, ಮತದಾನ ಮಾಡಬೇಕು. ಆದರೆ ಮತಗಣನೆ ಮಾಡಬಾರದು. ಅವರು ಇವರ ವಿರುದ್ಧ ಹಿಕ್ಮತ್ತು ಮಾಡಿದರು, ಅದಕ್ಕೇ ಇವರು ಸೋತರು ಎಂದೆಲ್ಲಾ ಗೋಳಿಡಬಾರದು.

ನಾವು ಇಲ್ಲಿಂದಿಲ್ಲಿಗೆ ಕಳಿಸಿದವರು ಶಾಸನ ಸಭೆಯಲ್ಲಿ ಮಾತಾಡಬೇಕು ಅಷ್ಟೇ. ಬೇರೆ ಏನೂ ಮಾಡಬಾರದು. (ಹೇಗೂ ನಮ್ಮ ಈಗಿನ ಯಾವ ನಾಯಕರಿಗೂ ಸಂಬಳ ಸಾರಿಗೆ ಬಿಟ್ಟು ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ ಬಿಡಿ. ಅವರು ಕಾನೂನು- ಕಾಯಿದೆಯಂತೂ ಮಾಡುತ್ತಲೇ ಇಲ್ಲ.) ಆದರೆ ``ನಾವು ಅಷ್ಟು ಖುಷಿಯಿಂದ ಚುನಾಯಿಸಿ ಕಳಿಸಿದ ಇವರು ಏನೂ ಮಾಡುತ್ತಲೇ ಇಲ್ಲವಲ್ಲ? ಏನು ಇವರ ಹಕೀಕತ್ತು?’’ ಎಂದು ನೀವು ಚಿಂತೆ ಮಾಡಬಾರದು.

ಇಷ್ಟೆಲ್ಲಾ ಆದರೂ ಬೇಜಾರು ಮಾಡಿಕೊಳ್ಳ ಬಾರದು. ಆವಾಗೀವಾಗ ನಾಟಕ ನೋಡಬಹುದು. ರಂಗ ತಾಲೀಮಿಗೆ ಮಾತ್ರ ಹೋಗಬಾರದು. ಸಿನಿಮಾ, ನಾಟಕ, ಹಾಡು, ಡಾನ್ಸು, ಯಾವುದಕ್ಕೂ ತಯಾರಿ ಮಾಡಬಾರದು. ಕಾರಿನಲ್ಲಿ ಹೋಗುವಾಗ ಎಫ್ ಎಮ್ ರೇಡಿಯೋ ಕೇಳಬಹುದು. ಆದರೆ ಆರ್ ಜೆ ಹೇಳಿದರು ಅಂತ ಹೇಳಿ `ಮಸ್ತ್ ಮಜಾ’ ಮಾಡಬಾರದು.
ಸಾಹಿತಿಗಳು ಸ್ಮಾರ್ಟ್ ಫೋನಿನಲ್ಲಿ ಸ್ಕ್ರಾಲು ಮಾಡಿಕೊಂಡೋ, ಲ್ಯಾಪುಟಾಪಿನಲ್ಲಿ ಟೈಪು ಮಾಡಿಕೊಂಡೋ,
ಬರವಣಿಗೆ ಮಾಡಬಹುದು. ಆದರೆ ಕಾಗದದ ಮೇಲೆ, ಲೇಖನಿ ಬಳಸಿ ಲೇಖನ ಬರೆಯಬಾರದು. ಬರೆದ ಪತ್ರವನ್ನು ಅಂಚೆ ಕಚೇರಿಯ ಡಬ್ಬಿಯಲ್ಲಿ ಹಾಕಬಾರದು. ಕೋರಿಯರ್ ಕಳಿಸಬಹುದು. 

ಲಾಸ್ಟಿಗೆ
ಭಾಷಾಭಿಮಾನ ಕೆರಳಿ ಮೈ ಬೆವರಿದಾಗ ನೀರು ಕುಡಿಯಬಾರದು. ಅಖಂಡ ಭಾರತಕ್ಕೊಂದೇ ಇರುವ ಪಬ್ಬುಗಳ ರಾಜಧಾನಿಯಲ್ಲಿ ಬೀರು ಕುಡಿದು ಕೊಂಡು ಓಡಾಡಬಹುದೇನೋ. 

ಇಲ್ಲಿಗೆ ನೋಟ್ಸು ಖತಂ ಆದವು. ಲೇಖನದ ಬಗ್ಗೆ ಮುಂದೆ ನೋಡೋಣ.  ----



ಸಾಯೋ ಸುದ್ದಿ


ಎಲ್ಲರಿಗೂ ನಮಸ್ಕಾರ.

ಎಲ್ಲ ಸುಂದರ ವಾದ ಪುರಾಣ ಕತೆಗಳೂ ಶುರುವಾಗುವ ಶೈಲಿಯಲ್ಲಿಯೇ ನಮ್ಮ ಇಂದಿನ ಕತೆಯನ್ನು ಶುರು ಮಾಡೊಣ.
ಒಂದಾನೊಂದು ಕಾಲದಲ್ಲಿ, ಅಂದರೆ  ಪೇಪರಿನವರೇ ಈ ಬ್ರಹ್ಮಾಂಡದ ಅನಭಿಷಕ್ತ ದೊರೆಗಳಾಗಿದ್ದೇವೆ ಎಂದು ತಿಳಿದುಕೊಂಡಿದ್ದ ಕಾಲದಲ್ಲಿ, ಬೆಂಗಳೂರೆಂಬೋ ಬೆಂಗಳೂರಿನಲ್ಲಿ ಒಂದು ಘಟನೆ ನಡೆಯಿತು.
ಒಂದು ಭಾನುವಾರ ಮುಂಜಾನೆ ಬೆಳಗಿನ ಪಾಳಿಯ ಪತ್ರಕರ್ತರೆಂಬೋ ಎಲ್ಲಾ ಶಾಪಗ್ರಸ್ತರು  ಪ್ರೆಸ್ ಕ್ಲಬ್ಬಿನ ಅಂಗಳದಲ್ಲಿ ಯಾವುದೋ ಒಂದು ಕಾರ್ಯಕ್ರಮದ ಪಿಕ್ ಅಪ್ಪಿನ ವಾಹನಕ್ಕಾಗಿ ಕಾಯ್ದು ಕುಳಿತಿದ್ದೆವು. ಅಷ್ಟೊತ್ತಿಗೆ ``ಬಲಿರೆ ಪರಾಕ್ರಮ ಕಂಠೀರವ ಬಲ್ಲಿರೇನಯ್ಯ?’’ ಅನ್ನುತ್ತಾ ನಮ್ಮೆಲ್ಲರಿಗೆ ಹಿರಿಯ ರಾಗಿದ್ದ, ಈಗ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿರುವ  ಎಂ. ಸಿದ್ಧರಾಜ ಸರ್ ಅವರು ರಂಗ ಪ್ರವೇಶ ಮಾಡಿದರು.
``ಅಲ್ರಯ್ಯಾ, ಭಾನುವಾರ ಬೆಳ -ಬೆಳಗ್ಗೆ, ಮನೆಯಲ್ಲಿ ಬೆಚ್ಚಗೆ ಕಾಫಿ ಕುಡಕೊಂಡು, ಮಧ್ಯಾಹ್ನ ಚನ್ನಾಗಿ ಬಾಡೂಟ ಮಾಡಕೊಂಡ್ ಮಲಕೊಳ್ಳೊದ್ ಬಿಟ್ಟು ಇದೇನ್ ಕರ್ಮಾ ನ್ ರಯ್ಯಾ ನಮಗೆಲ್ಲಾ? ಅಂದರು.

ಇವತ್ತಿನ ಭಾನುವಾರ ಈ ಚಂದದ ಊರಿನ ನೂರಾರು ಬಣ್ಣ ಬಣ್ಣದ ಕಾರ್ಯಕ್ರಮಗಳನ್ನು ಬದಿಗೊತ್ತಿ ಈ ಕಾರ್ಯಾಗಾರಕ್ಕೆ ಬಂದಿರುವ ನಿಮ್ಮನ್ನು ನೋಡಿ ನನಗೆ ಆ ಮಾತು ನೆನಪಾಗುತ್ತಿದೆ.
ಅಂದು ಅವರ ಮಾತಿಗೆ ನಾನು ನಕ್ಕಿದ್ದೆ. ಆದರೆ ಈಗ, ನನಗೆ ವಯಸ್ಸಾಗುತ್ತಿದ್ದಂತೆಯೇ, ಆ ಮಾತಿನ ಅರ್ಥ ಅರಿವಿಗೆ ಬರುತ್ತಿದೆ.

ಪೇಪರಿನಲ್ಲಿ ಕೆಲಸ ಅಂದ ತಕ್ಷಣ ಕಣ್ಣಲ್ಲಿ ಮೂಗಿನಲ್ಲಿ ತುಂಬಿಕೊಂಡು, ಒಳ್ಳೆ ಒಲಂಪಿಕ್ಸಿಗೆ ಹೋದಂಗೆ ಹುಮ್ಮಸ್ಸಿನಿಂದ ಹೋಗುತ್ತಿದ್ದ ನಮ್ಮನ್ನೆಲ್ಲಾ ಕೂಡಿಸಿಕೊಂಡು ಅವರು ಅಂದು ``ನಮ್ಮ ದಿನ ನಿತ್ಯದ ಬದುಕು ಎಲ್ಲಕ್ಕಿಂತ ದೊಡ್ಡದು’’ ಎನ್ನುವ ತೂಕದ ಮಾತೊಂದನ್ನು ಹೇಳಿದರು ಅಂತ ಈಗ ಅನ್ನಿಸುತ್ತಿದೆ.

ಇನ್ನು ನಾನು ಈ ಊರಿಗೆ ಬರುವಾಗ ಸ್ವಲ್ಪ ಹಿಂಜರಿಕೆಯಿಂದಲೇ ಬಂದಿದ್ದೇನೆ. ಉಡುಪಿ ನನ್ನ ಅತ್ತೆಯ ತವರು ಮನೆ. ಹೆಂಡತಿಯ ತವರು ಮನೆಯಲ್ಲಿ ಮಾತಾಡಬೇಕೆಂದರೇ ಅಷ್ಟು ಹೆದರುವ ನಾನು ಅವರ ತಾಯಿಯ ತವರು ಮನೆಯಲ್ಲಿ ಮಾತಾಡಬೇಕಾದರೆ ಅದೆಷ್ಟು ಹಿಂಜರಿಯಬೇಡ? ಅಲ್ಲವೇ?

ಇರಲಿ ಬಿಡಿ. ನಮ್ಮ ಧಾರವಾಡ ಸೀಮೆಯಲ್ಲಿ ಒಂದು ಗಾದೆ ಮಾತು ಇದೆ. `ಶುಭ ನುಡಿಯೇ ಮೊದಲಗಿತ್ತಿ ಎಂದರೆ, ``ಅಂಗಳ ತುಂಬಾ ರಂಡೇರು’’ ಎಂದಿದ್ದಳಂತೆಅಂತ. ಅಂದರೆ ವಧು ವೊಬ್ಬಳು ಮದುವೆಯಾದ ಮೊದಲ ದಿನ ಬೇರೆ ಎಲ್ಲಾ ವಿಷಯಗಳನ್ನು ಬಿಟ್ಟು ಗಂಡನ ಮನೆಯಲ್ಲಿ ರುವ ಹಿರಿಯ ವಿಧವೆ ಯರ ಬಗ್ಗೆ ಮಾತಾಡಿದ್ದಳಂತೆ.

ಸಾಯೋ ಸುದ್ದಿ
ಅಂತೆಯೇ ನಾನು ಸ್ಮಶಾನ ವೈರಾಗ್ಯ ದ ಮಾತುಗಳೊಂದಿಗೆ ಆರಂಭ ಮಾಡುತ್ತಿದ್ದೇನೆ. `ಕನಸೆಂಬೋ ಕುದುರೆಯನೇರಿ ಎನ್ನುವ ಗಿರೀಶ ಕಾಸರವಳ್ಳಿ ಅವರ ಸಿನಿಮಾದಲ್ಲಿ ನಾಯಕನಿಗೆ ನಾಳೆ ಯಾರು ಸಾಯುತ್ತಾರೆ ಎನ್ನುವ ಕನಸು ಬೀಳುತ್ತದೆ. ಸಮಾಧಿಯ ತೆಗ್ಗು ತೊಡುವ ಕಾಯಕದ ಆ ಬಡವ ತನಗೆ ಸಿಗುವ ಕೂಲಿಯ ಆಸೆಯಿಂದ ಸಾಯಲಿರುವ ಸಾಹುಕಾರರ ಮನೆ ಯ ಮುಂದೆ ಕೂಡುತ್ತಾನೆ. ನಮ್ಮ ಯಜಮಾನ ಸಾಯಬಾರದು ಇಷ್ಟು ಬೇಗ ಸಾಯಬಾರದು ಎಂಬ ದುರಾಸೆಯಿರುವ ಕುಟುಂಬ ವೊಂದರ ಸದಸ್ಯರು ಅವನನ್ನು ಹೊಡೆದು ಹೊರಗಟ್ಟುತ್ತಾರೆ.
ನಾಯಕ ನ ಪಾತ್ರ ವಹಿಸಿರುವ ವೈಜನಾಥ ಬಿರಾದಾರ್ ಅವರು ಬೀದರ್ ಜಿಲ್ಲೆಯವರು. ಅಲ್ಲಿಂದ ಬಂದಿರುವ ನಾನು ಇನ್ನು ಕೆಲವೇ ವರ್ಷಗಳಲ್ಲಿ ಪತ್ರಿಕೋದ್ಯಮ ಸಾಯುತ್ತದೆ ಎನ್ನುವ ಕನಸು ಬಿದ್ದಿರುವಂತೆ ನಟಿಸುತ್ತಿದ್ದೇನೋ ಏನೋ. ಆ ಕೆಟ್ಟ ಸುದ್ದಿಯನ್ನು ಹೇಳಲು ನಿಮ್ಮ ಮನೆಯ ಕಟ್ಟೆಗೆ ಬಂದು ಕೂತಿದ್ದೇನೋ ಏನೋ. ``ಹಾಗೇನೂ ಆಗುವುದಿಲ್ಲ ಹೋಗೋ’’ ಎಂದು ನೀವು ನನ್ನನ್ನು ಗದರಿಸಿ ಕಳಿಸುತ್ತೀರೇನೋ ಅಂತ ನನಗೆ ಅನ್ನಿಸುತ್ತದೆ. ಸಾಧಾರಣವಾಗಿ ಕೆಟ್ಟ ಸುದ್ದಿ ತರುವವರು ಅವಿವೇಕಿಗಳೇ ಆಗಿರುವುದರಿಂದ, ನಾನು ಏನಾದರೂ ಹೆಚ್ಚು ಕಮ್ಮಿ ಮಾತಾಡಿದರೆ ಅವರಲ್ಲಿ ನಾನೂ ಒಬ್ಬ ನೆಂದು ನೀವು ಅಂದುಕೊಂಡು ಬಿಡಿ.

ಕಳೆದ ವಾರ ಬಿಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಅಂಕಣ ಬರೆದ ಆಕಾರ ಪಟೇಲ್ ಅವರು ಪತ್ರಿಕೆಗಳ ನಿಧನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಅವರ ಪ್ರಕಾರ 2020ಕ್ಕೆ, ಅಂದರೆ ಇಂದಿಗೆ ಕೇವಲ ಮೂರು ವರ್ಷಗಳಲ್ಲಿ ಭಾರತದಲ್ಲಿ ಪತ್ರಿಕೆಗಳೇ ಇರೋದಿಲ್ಲ. ಇವತ್ತಿನ ಮಟ್ಟಿಗೆ ನಾವು ಯಾವುದನ್ನು ಸುದ್ದಿ ಎಂದುಕೊಳ್ಳುತ್ತೀವೋ, ಅದಂತೂ ಅದಕ್ಕಿಂತ ಮೊದಲೇ ಹೋಗಿ ಬಿಟ್ಟಿರುತ್ತದೆ ಎಂದು ಹೇಳಿದ್ದಾರೆ. ಸುದ್ದಿಗೂ ಮನರಂಜನೆಗೂ ವ್ಯತ್ಯಾಸವೇ ಗೊತ್ತಾಗದಂತೆ ಆಗಬಹುದು. ಸುದ್ದಿ ಎಂದರೆ ಕೇವಲ ಅಭಿಪ್ರಾಯ ಮಂಡನೆ ಆಗಿಬಿಡುತ್ತದೆ. ಪತ್ರಕರ್ತರು ಬೇರೆ ಕೆಲಸ ಹುಡುಕಬೇಕಾಗಬಹುದು. ಇದು ಕೇವಲ ಇಂಗ್ಲೀಷ್ ಪತ್ರಿಕೆಗಳ ಹಣೆಬರಹ ಅಲ್ಲ. ಭಾರತೀಯ ಭಾಷೆಗಳೂ ಇದೇ ಸಮಸ್ಯೆ ಎದುರಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

ನೀವು ನಿನ್ನೆಯ ಟೈಂಸ್ ಆಫ್ ಇಂಡಿಯಾದ ಸಂಪಾದಕೀಯವನ್ನು ನೋಡಿದ್ದರೆ ಪತ್ರಿಕೆಗಳ ನಷ್ಟದ ಪ್ರಮಾಣ ನಿಮ್ಮ ಗಮನಕ್ಕೆ ಬಂದಿರಬಹುದು. ಗಳಿಕೆ ಕೇವಲ ನಾಲ್ಕು ಶೇಕಡಾ ಹೆಚ್ಚಾಗಿದ್ದರೆ, ಖರ್ಚು ಶೇ. 58 ರಷ್ಟು ಬೆಳೆದಿದೆ. ಸರಕಾರ ತೆರಿಗೆ ಕಡಿಮೆ ಮಾಡಿ, ಜಾಹಿರಾತನ್ನು ಹೆಚ್ಚಿಸಿದರೆ ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲದು ಎಂದು ಅದರಲ್ಲಿ ಹೇಳಲಾಗಿದೆ.
ಸಾವು ಹಾಗೂ ನಾವು
ಈಗ ಸ್ವಲ್ಪ ಗರುಡ ಪುರಾಣದ ದ ಗಮನ ಹರಿಸೋಣ. ಕುಟುಂಬ ದ ಸದಸ್ಯರೊಬ್ಬರು ತೀರಿ ಹೋದಾಗ ಅವರ ಸಂಬಂಧಿಕರು ಒಟ್ಟಾಗಿ ಕೇಳುವ ಪುರಾಣ ವಿದು. ಅದರಲ್ಲಿ ಮೃತ್ಯುವಿನ ಬಗ್ಗೆ ಈ ಮಾತು ಬರುತ್ತವೆ.
1.``ಹುಟ್ಟುವರು ಸಾಯಲೇ ಬೇಕು. ಸತ್ತವರು ಹುಟ್ಟಲೇ ಬೇಕು. ಪ್ರಾಜ್ಞರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು’’
2. ``ದೇಹ ವೆನ್ನುವುದು ಒಂದು ಕನಸಷ್ಟೇ. ಅದರ ರೂಪ ಮುಖ್ಯವಲ್ಲ. ಅದರಲ್ಲಿ ಇರುವ ಆತ್ಮ ಮುಖ್ಯ. ಅದು ಇಂದು ಇರುತ್ತದೆ, ನಾಳೆ ಹೋಗುತ್ತದೆ. ಈ ಬಾಹ್ಯ ರೂಪಕ್ಕೆ ಅಂಟಿಕೊಂಡು ಕೂಡಬಾರದು. ನಮ್ಮ ದೇಹವೇ ತಾತ್ಕಾಲಿಕವಾದಾಗ ಇತರರ ದೇಹ ಶಾಶ್ವತ ವಾಗಿರಲಿ ಎಂದು ಏಕೆ ಆಸೆ ಪಡಬೇಕು?’’ 
ಆದರೆ ಈ ಎರಡೂ ಮಾತು ಗಳು ಪತ್ರಿಕೆ ಗಳ ಬಗ್ಗೆ ಹೇಳಿದಂತೆ ನನಗೆ ಕೇಳಿಸುತ್ತದೆ.

ಹಾಗಾದರೆ ಇಷ್ಟೆಲ್ಲಾ ಆಗುತ್ತಿರುವುದಕ್ಕೆ ಕಾರಣಗಳೇನು? ಸಿಬ್ಬಂದಿ ವೇತನ ಹಚ್ಚಳಕ್ಕೆ ಕಾರಣವಾದ ವೇತನ ಆಯೋಗ, ಜಾರುತ್ತಿರುವ ಜಾಹಿರಾತು ವರಮಾನ, ಮುದ್ರಣ ತಂತ್ರಜ್ಞಾನ ಹಾಗೂ ಕಾಗದದ ಬೆಲೆ ಹೆಚ್ಚಳಹಾಗೂ ನಲವತ್ತು ವರ್ಷಗಳಿಂದ ಬದಲಾಗದೇ ಇರುವ ಮುಖ ಬೆಲೆ.

ಇದಕ್ಕೆ ಇರುವ ಇನ್ನೊಂದು ಮುಖ್ಯ ಕಾರಣ ಎಂದರೆ ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ನಮ್ಮ ಬದುಕಿನ ಮೇಲೆ ನಿಧಾನವಾಗಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಪ್ರಭಾವ.

ಕೆಲವೇ ಕೆಲವು ಜನ ಕಚೇರಿಯಲ್ಲಿ ಕುಳಿತುಕೊಂಡು ತಯಾರಿಸುವ ಪತ್ರಿಕೆಗಳಿಗಿಂತ ಎಲ್ಲರ ಕೈಯಲ್ಲಿ ಓಡಾಡುವ ಫೋನುಗಳಿಂದ, ಮನೆಗಳಲ್ಲಿನ ಗಣಕಗಳಿಂದ ಕ್ಷಣಕ್ಷಣಕ್ಕೂ ಮೂಡುವ ಸಾಮಾಜಿಕ ಜಾಲತಾಣಗಳ ಪೋಸ್ಟುಗಳು ಹೆಚ್ಚು ಆಸಕ್ತಿ ಮೂಡಿಸುತ್ತಿವೆಯೇ?
ನಾನು ಯಾವುದಾದರೂ ಕಾಲೇಜಿಗೆ ಹೋದಾಗ ಇವತ್ತು ಎಷ್ಟು ಜನ ಪೇಪರ್ ಓದಿದ್ದೀರಿ ? ಎಂದು ಕೇಳುತ್ತೇನೆ. ಬಹಳ ಕಡಿಮೆ ಜನ ಕೈ ಎತ್ತುತ್ತಾರೆ. ಅಯ್ಯೋ ಹಾಗೆ ಮಾಡಬೇಡಿ ಎನ್ನುತ್ತೇನೆ.
ಎಷ್ಟು ಜನ ಫೋನಿನಲ್ಲಿ ಟ್ವಿಟರ್- ಫೇಸ್ ಬುಕ್ ನೋಡಿದ್ದೀರಿ? ಎಂದಾಗ ಇಡೀ ಕ್ಲಾಸು ಕೈ ಎತ್ತುತ್ತದೆ. ಅದರಲ್ಲಿ ಏನ ನ್ನು ನೋಡಿದ್ದೀರಿ ಎಂದರೆ ಅರ್ಧದಷ್ಟಾದರೂ ಜನ ಪತ್ರಿಕೆಗಳ ಸುದ್ದಿಗಳನ್ನೇ ಓದಿರುತ್ತಾರೆ. ಇಂಥದೆಲ್ಲದಕ್ಕೆ ಬೇಡಿಕೆ ಇದೆ ಎಂದರೆ ನಮಗೆ ನಷ್ಟವಾಗುತ್ತಿರುವುದು ಏಕೆ?

ಹೊಸ ತಂತ್ರಜ್ಞಾನ ಬಂದಾಗ ಹಳೆಯದು ಹೊರಹೊಗುತ್ತದೆ ಎನ್ನುವ ಮಾತು ಸಹಜ. ಬ್ರಿಟಿಷರ ಯಂತ್ರ ಗಳು ತಯಾರಿಸಿದ ಚಮಕ್ ಬಟ್ಟೆಗಳ ಭರಾಟೆಯ ಎದುರಿಗೆ ಕೈಮಗ್ಗದ ಬಟ್ಟೆಗಳು ಸೋತು ಹೋಗುತ್ತಿದ್ದಾಗ ಇದೇ ಮಾತು ಕೇಳಿ ಬಂದಿದ್ದು. ಟಿವಿ ಬಂದಾಗ ರೇಡಿಯೋದ ಬಗ್ಗೆ ಇದೇ ಮಾತುಗಳನ್ನು ಹೇಳಲಾಗಿತ್ತೇ? ಇಂಟರನೆಟ್ ಬಂದಾಗ ಇತರ ಎಲ್ಲ ಸುದ್ದಿ ಹಾಗೂ ಮನರಂಜನೆಯ ಮಾಧ್ಯಮಗಳ ಬಗ್ಗೆ ಇದನ್ನೇ ಹೇಳಲಾಗಿತ್ತೇ?
ಹೌದು ಮತ್ತು ಇಲ್ಲ. ಹೌದು ಎನ್ನುವುದು ಯಾಕೆಂದರೆ ತಂತ್ರಜ್ಞಾನ ಬದಲಾವಣೆಯ ಪ್ರತಿಯೊಂದು ಮೆಟ್ಟಿಲಲ್ಲೂ ಸಹ ಹಳೆಯ ತಾಂತ್ರಿಕತೆ, ಪದ್ಧತಿ, ಶೈಲಿ ಇವೆಲ್ಲದಕ್ಕೂ ಅಸುರಕ್ಷತಾ ಭಾವ ಕಾಡಿದ್ದಿದೆ. ಹೊಸದನ್ನು ಜನ ಅಪ್ಪಿಕೊಂಡಾಗ ಹಳೆಯದು ಇರಲೇ ಇಲ್ಲ ವೇನೋ ಎನ್ನುವಂತೆ ನಡೆದುಕೊಂಡಿದ್ದಿದೆವಿದ್ಯುತ್ ದೀಪದಿಂದಾಗಿ ಕೆಲಸ ಕಳೆದುಕೊಂಡ ಕುಂಬಾರರು, ಎಣ್ಣೆ ತೆಗೆಯುವವರು ಬೇರೆ ಕೆಲಸ ಕಲಿತುಕೊಂಡರು. ಹೊಸ ರೀತಿಯ, ಹೊಸ ಶೈಲಿಯ, ಹೊಸ ಆರ್ಥಿಕತೆಗೆ ಹೊಂದಿಕೊಳ್ಳುವ ಹೊಸ ಕುಂಬಾರರು, ಎಣ್ಣೆ ತೆಗೆಯುವವರು ಹುಟ್ಟಿಕೊಂಡರು. ಆ ಕತೆಗಳೇ ಬೇರೆ.
ಆದರೆ ಈಗಿನ ಸವಾಲೇ ಬೇರೆ. ಸಾಮಾಜಿಕ ಜಾಲತಾಣಗಳು ಕೇವಲ ತಮ್ಮ ತಂತ್ರಜ್ಞಾನ, ಅಥವಾ ಸ್ವರೂಪ (ಫಾರ್ಮ್) ನಿಂದಾಗಿ ಮಾತ್ರ ಹಳೆಯದಕ್ಕೆ ಸೆಡ್ಡು ಹೊಡೆಯುತ್ತಿಲ್ಲ. ನಮ್ಮ ಚಿಂತನಾ ಕ್ರಮ, ಮಾತುಕತೆ,  ನಿರೂಪಣೆ, ವಾದ -ವಿವಾದದ ರೀತಿ, ಹಾಗೂ ಅಂತಿಮವಾಗಿ ಮನುಷ್ಯ ಸಂಬಂಧಗಳ ನ್ನು ಸಹ ಇವು ಬದಲಾಯಿಸುತ್ತಿವೆ.

ನವ ಮಾಧ್ಯಮದಿಂದ ಹಳೆಯ ಮಾಧ್ಯಮಗಳಿಗೆ ಅಪಾಯ ಇದೆ ಎನ್ನವುದು ಕೇವಲ ಪತ್ರಿಕೆ ಗಳ ಬಗ್ಗೆ ಹೇಳುವ ಮಾತಲ್ಲ. ಈ ಮಾತುಗಳನ್ನು ಟಿವಿ, ಹಾಗೂ ರೇಡಿಯೋ ಗಳ ಬಗೆಯೂ ಹೇಳಬಹುದು. 
ನಾನು ಕೆಲಸ ಶುರು ಮಾಡಿದಾಗ ಟೈಪ್ ಸೆಟ್ಟಿಂಗ್ ಹೋಗಿ ಕಂಪ್ಯೂಟರ್ ಗಳ ಬಳಕೆ ಆರಂಭವಾಗಿತ್ತು. ನಮ್ಮ ಸುದ್ದಿಗಳನ್ನು ಮುದ್ರಣ ಹಾಗೂ ಅಂತರ್ಜಾಲ ಇವೆರಡರಲ್ಲೂ ಏಕಕಾಲಕ್ಕೆ ಹೊರಹಾಕಿದ, ತನ್ನ ಸುದ್ದಿ ಗಳ ಮೂಲವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿದ ತಲೆಮಾರು ಬಹುಶಃ ನಮ್ಮದೇ ಇರಬಹುದು. ಇದನ್ನು ನೆನೆಸಿಕೊಂಡಾಗ ನನಗೆ ಅಮೇರಿಕೆಯ ನನ್ನ ಸ್ನೇಹಿತ ಸ್ಯಾಮ್ ಫೋರ್ಮನ್ ನೆನಪಾಗುತ್ತಾರೆ. ಅವರ ಅಜ್ಜ ತಮ್ಮ ಜೀವನ ಕಾಲದಲ್ಲಿ ರೈಟ್ ಸಹೋದರರ ವಿಮಾನ ನೆಲದಿಂದ ಮೇಲಕ್ಕೆ ಎದ್ದಿದ್ದನ್ನೂ ಹಾಗೂ ಅಮೇರಿಕೆ ಯ ಗಗನ ಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟದ್ದನ್ನೂ ನೋಡಿದ್ದರಂತೆ.
ಏನೇನನ್ನೋ ನೊಡಿದ್ದ ನಾವು ಇನ್ನೂ ಎನೇನನ್ನೋ ನೋಡಲಿದ್ದೇವೆಯೋ?

ಪರಿಹಾರದ ಆಶಯ
ಗ್ರೀನ್ ನ್ಯೂ ಯಾರ್ಕ್ ಟೈಮ್ಸ್ ನ ಲ್ಯಾಟಿನ್ ಅಮೇರಿಕ ವಿಭಾಗದ ಮುಖ್ಯಸ್ಥರಾದ ಲಿಡಿಯಾ ಪೊಲ್ ಬರೆದ ``ನಾವೆಲ್ಲಾ ಯಾಕೆ ನ್ಯೂ ಯಾರ್ಕ್ ಟೈಮ್ಸ್ ಓದಬೇಕು?’’ ಎನ್ನುವ ಲೇಖನವನ್ನು ನೋಡಿದರೆ ಪರಿಸ್ಥಿತಿ ಅಷ್ಟೊಂದು ಕೈ ಮೀರಿ ಹೋಗಿಲ್ಲ ವೆನ್ನುವ ಅರಿವಾಗುತ್ತದೆ.
ಫೇಸುಬುಕ್ಕಿನಿಂದ ಜಾಹಿರಾತನ್ನು ಕಳೆದುಕೊಂಡ ಸಂಸ್ಥೆ ಮತ್ತೆ ಫೇಸುಬುಕ್ಕನ್ನೇ ಬಳಸಿ ಹೊಸ ಓದುಗರನ್ನು ಹುಡುಕಿಕೊಂಡ ಪರಿಯನ್ನು ಈ ಲೇಖನ ತಿಳಿಸುತ್ತದೆ.
ತಮ್ಮ ತಮ್ಮ ಆಸಕ್ತಿ – ಸ್ವಭಾವ ಹಾಗೂ ಅಭಿಪ್ರಾಯದ ಆಧಾರದ ಮೇಲೆ ಜನರನ್ನು ವಿಭಿನ್ನ ಗುಂಪುಗಳಾಗಿ ವಿಂಗಡಿಸುವ ತಂತ್ರಜ್ಞಾನದ ಮೇಲೆ ನಿಂತಿರುವ ಫೇಸುಬುಕ್ಕು ನ್ಯೂ ಯಾರ್ಕ್ ಟೈಮ್ಸ್ ತನ್ನಲ್ಲಿ ಅಚ್ಚಾಗುವ ಸುದ್ದಿಗಳಿಗೆ ಸೂಕ್ತ ಓದುಗರನ್ನು ಹುಡುಕಿ, ಅವರನ್ನು ದುಡ್ಡು ಕೊಟ್ಟು ಓದುವ ಗ್ರಾಹಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.
ಆ ಪತ್ರಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಾಹಿರಾತಿಗಿಂತ ಹೆಚ್ಚು ಆದಾಯವನ್ನು ಆನ್ ಲೈನ್ ಓದುಗರಿಂದ ಚಂದಾ ಸಂಗ್ರಹಿಸಲಾಗುತ್ತಿದೆ.
ಇದು ಮಾಹಿತಿ ತಂತ್ರಜ್ಞಾನದ ಸಾಗರದಲ್ಲಿ ಕೊಚ್ಚಿ ಹೋಗುತ್ತಿರುವ ಪತ್ರಕರ್ತರಿಗೆ ಆಸರೆಯ ಕಡ್ಡಿ ಇರಬಹುದೋ ಏನೋ. 

`ಸತ್ಯೋತ್ತರ’ 
ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಡೊನಾಲ್ಡ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಎರಡು ದಿನಗಳ ನಂತರ ನಾವು ಭೇಟಿ ಆಗಿದ್ದೇವೆ. ಯಾವುದು ಅಮೇರಿಕದಂತಹ ಮುಂದುವರೆದ ದೇಶದಲ್ಲಿ ನಡೆಯಲು ಸಾಧ್ಯವೇ ಇಲ್ಲವೆಂದು ರಾಜಕೀಯ ಪಂಡಿತರೂ ಸೇರಿದಂತೆ ಅನೇಕರು ಅಂದುಕೊಂಡಿದ್ದರೋ ಅದು ಘಟಿಸಿ ಹೋಗಿದೆ. ತನ್ನ ವಿರೋಧಿಗಿಂತ ಮೂವತ್ತು ಲಕ್ಷ ಕಡಿಮೆ ಮತಗಳನ್ನು ಪಡೆದ ಟ್ರಂಪ್ ಅವರು ಜಗತ್ತಿನ ಅತಿ ದೊಡ್ಡ ಮಿಲಿಟರಿ ಶಕ್ತಿಯ ಮುಖ್ಯ ಕಮಾಂಡರ್ ಆಗಿದ್ದಾರೆ.

ಸುಮಾರು ಎರಡು ನೂರು ವರ್ಷ ಹಳೆಯ ಚುನಾವಣಾ ವ್ಯವಸ್ಥೆ  ಯಲ್ಲಿ ದೋಷವಿದ್ದುದರಿಂದ ಕಮ್ಮಿ ಓಟು ತೆಗೆದುಕೊಂಡವರೂ ಗೆಲ್ಲುವಂತಾಗಿರಬಹುದು. ಆದರೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಟ್ರಂಪ್ ಗೆದ್ದರು ಎನ್ನುವುದು ಅದಕ್ಕಿಂತ ಹೆಚ್ಚಿನ ಮಹತ್ವದ್ದು.  ಟ್ರಂಪ್ ಅವರ ಕುಟುಂಬದ ಅಡ್ಡ ಹೆಸರು ತುತ್ತೂರಿ ಅಥವಾ ತಮಟೆ ಯಿಂದಾಗಿ ಬಂದಿದ್ದಂತೆ. ಸಮೂಹ ಮಾಧ್ಯಮಗಳಲ್ಲಿ ನನಗೆ ವಿಶ್ವಾಸ ವಿಲ್ಲ ವೆಂದು ಘಂಟಾ ಘೋಷವಾಗಿ ಹೇಳಿಕೊಳ್ಳುವ ಟ್ರಂಪ್ ಅವರು ಹೆಸರಿಗೆ ತಕ್ಕಂತೆ ತಮ್ಮ ತಮಟೆ ಊದಲಿಕ್ಕೆ ಬಳಸಿಕೊಂಡಿದ್ದು ಸಾಮಾಜಿಕ ಮಾಧ್ಯಮ ತಾಣಗಳನ್ನು.
ಟ್ರಂಪ್ ಅವರು ಹೇಳಿದ್ದು ಸುಳ್ಳು ಹೌದೋ ಅಲ್ಲವೋ ಎನ್ನುವುದನ್ನು ಪರೀಕ್ಷಿಸಲಿಕ್ಕೆಯೇ ಈಗ ಪಾಲಿಟ್ ಫ್ಯಾಕ್ಟ್ ಮುಂತಾದ ತಾಣಗಳು ಹುಟ್ಟಿಕೊಂಡಿವೆ.
ಅವರು ಹೇಳಿದ್ದು ಸುಳ್ಳಲ್ಲ, ಸತ್ಯೋತ್ತರ ಎಂದು ಕೆಲವರು ಬಣ್ಣಿಸಿದ್ದಾರೆ.  ಭಾರತೀಯ ತತ್ವ ಶಾಸ್ತ್ರದ ಪ್ರಕಾರ ಸತ್ಯದ ನಂತರ ಬರುವುದು ‍ಋತ, ಅಂದರೆ ಅಂತಿಮ ಸತ್ಯ, ಸರ್ವ ಕಾಲಿಕ ಸತ್ಯ. ಸುಳ್ಳಲ್ಲ  ಎನ್ನುವುದು ನನ್ನ ನಂಬಿಕೆ.
ಅದಕ್ಕೆ ಉತ್ತರ ವೆಂಬಂತೆ ಬರಾಕ್ ಒಬಾಮಾ ಅವರು ಸಮೂಹ ಮಾಧ್ಯಮಗಳ ಮೇಲೆ ಜನರ ನಂಬಿಕೆ ಕಡಿಮೆ ಯಾಗುತ್ತಿದೆ. ಇದನ್ನು ಮಾಧ್ಯಮಗಳು ಒಂದು ಸುವರ್ಣ ಅವಕಾಶ ವನ್ನಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇನ್ನು ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆ ದೊರಕಿದ್ದು ಭಾರತದ ಲ್ಲಿ ನಡೆದ 2014 ರ ಲೋಕಸಭಾ ಚುನಾವಣೆಗೆ.
ಇದಕ್ಕೆ ಇನ್ನೂ ಇತರ ವಿಶೇಷಣಗಳು ಅಂಟಿಕೊಂಡಿವೆ. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಮತದಾರರು ಭಾಗವಹಿಸಿದ್ದು, ಅತಿ ಹೆಚ್ಚು ಶೇಕಡಾ ಮತದಾನ ವಾಗಿದ್ದು ಹಾಗೂ ಅತಿ ಹೆಚ್ಚು ಸಂಖ್ಯೆಯ ಚುನಾವಣಾ ಸಿಬ್ಬಂದಿ ಕೆಲಸ ಮಾಡಿದ್ದು. ಇವಕ್ಕೆ ಹೋಲಿಸಬಹುದಾದ ದಾಖಲೆಗಳು ಇತರ ಯಾವ ದೇಶಗಳಲ್ಲಿಯೂ ಇಲ್ಲ. ಆದ್ದರಿಂದ ಇವೆಲ್ಲವೂ ಜಾಗತಿಕ ದಾಖಲೆಗಳೂ ಹೌದು.
ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಹಾಗೂ ಮಧ್ಯಮ ವರ್ಗದವರು ಚುನಾವಣೆಯಲ್ಲಿ ಆಸಕ್ತಿ ತಳೆದ ಚುನಾವಣೆ ಇದು ಎಂದು ಸಹ ಕೆಲವರು ಹೇಳುತ್ತಿದ್ದಾರೆ.

ಆದರೆ ಇದನ್ನೂ ಒಳಗೊಂಡಂತೆ ಈ ಚುನಾವಣೆಯ ಬಗೆಗಿನ ಇತರ ಹಲವು ವಿದ್ಯಮಾನಗಳ ಬಗ್ಗೆ ಸರಿಯಾದ ಸಂಶೋಧನೆ ನಡೆದಿಲ್ಲ.

ಇನ್ನು ಪ್ರಶಾಂತ ಕಿಶೋರರಂತಹ ವೃತ್ತಿಪರ ಪ್ರಬಂಧಕರು ಇಡೀ ಪ್ರಚಾರವನ್ನು ಮುನ್ನಡೆಸಿದ್ದು ಸಹ ಈ ಬಾರಿಯ ವಿಶೇಷ. ಒಂದಕ್ಕಿಂತ ಹೆಚ್ಚು ಪಕ್ಷಗಳ ಅಭ್ಯರ್ಥಿ ಗಳು ಇಂಥವರ ನೆರವನ್ನು ಪಡೆದಿವೆ ಎನ್ನುವುದನ್ನು ನಾವು ಮರೆಯಬಾರದು

ಅಂತೆಯೇ ಈ ಚುನಾವಣೆ ಯನ್ನು ಬಹಳ ದಿನಗಳ ವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದು, ಇದರಲ್ಲಿನ ಸಾಮಾಜಿಕ ಜಾಲತಾಣಗಳ ಬಳಕೆ. ಮಾಹಿತಿ ತಂತ್ರಜ್ಞಾನ ದ ಬೆಳವಣಿಗೆ ಹಾಗೂ ಅದನ್ನು ಬಳಸುವ ನೀತಿ ನಿಯಮ ಗಳ ಸರಳೀಕರಣದ ನಂತರ ಸಾಮಾಜಿಕ ಜಾಲತಾಣಗಳು ಅನೇಕರ ಕೈಸೇರಿದವು. ಇವು ಚುನಾವಣೆ ಪ್ರಚಾರದ ಮೂಲ ಸ್ವರೂಪವನ್ನೇ ಬದಲಾಯಿಸಿದವು. ಇದೆಲ್ಲ ಸಾಧ್ಯವಾದದ್ದು ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಎನ್ನುವವರಿದ್ದಾರೆ. ಅಷ್ಟೇ ಜೋರಾಗಿ ಅದನ್ನು ಅಲ್ಲಗಳೆಯುವವರೂ ಇದ್ದಾರೆ.

ಇಲ್ಲಿಯವರೆಗೆ, ಸರ್ವೇ ಸಾಧಾರಣವಾಗಿ ಚುನಾವಣಾ ಪ್ರಚಾರ ಸಾಮಗ್ರಿಯ ಮೂಲ ಒಂದೇ ಇರುತ್ತಿತ್ತು. ಅದು ಸಂಪೂರ್ಣವಾಗಿ ಬದಲಾಯಿತು. ತಮ್ಮ ತಮ್ಮ ವೈಯಕ್ತಿಕ ನೆಲೆಯಿಂದ ಅನೇಕರು ಅನೇಕ ರೀತಿಯ ಪ್ರಚಾರ ಮಾಡುವುದು ಆರಂಭವಾಯಿತು. ಅದಕ್ಕೆ ಹೊಸ ತಾಂತ್ರಿಕ ಸಾಧನಗಳನ್ನು ಬಳಸಲಾಯಿತು.

ಇನ್ನು ಪಕ್ಷಗಳ ಪ್ರಚಾರ ಇಷ್ಟೇ ದಿನ ನಡೆಯಬೇಕು ಎನ್ನುವ ನಿಯಮ ಪಾಲನೆಯಾಗಲಿಲ್ಲ. ಅಭ್ಯರ್ಥಿ ಹಾಗೂ ಅವನ ಪಕ್ಷ ಕೇವಲ ಮೂರು ವಾರಗಳ ಪ್ರಚಾರ ಮಾಡಬೇಕು ಎನ್ನುವುದನ್ನು ಯಾವ ಪಕ್ಷವೂ ಪಾಲಿಸಲಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಚಾರವನ್ನೂ ಸೇರಿಸಿದರೆ ಅದು ಸರಿ ಸುಮಾರು ಎರಡು ವರ್ಷ ನಡೆಯಿತು.
ಚುನಾವಣೆ ಮುಗಿದು ಮೂರು ವರ್ಷವಾಗಲು ಬಂದರೂ ಸಹ ಪ್ರಚಾರದ ಶಾಖ ಕಮ್ಮಿಯಾಗಿಲ್ಲ. ಚುನಾವಣಾ ಆಯೋಗ ತನ್ನ ಕೆಲಸ ಮುಗಿಸಿ ಮರೆತು ಬಿಟ್ಟರೂ ಸಾಮಾಜಿಕ ಜಾಲ ತಾಣಗಳು ಅದನ್ನು ಇನ್ನೂ ಜಾರಿಗಿಟ್ಟಿವೆ. ಇದು ನಮ್ಮ ಸಮಯವನ್ನು ಹಾಳು ಮಾಡಿದೆ, ವರ್ಷಾನು ಗಟ್ಟಲೇ ಜೊತೆಗೆ ಬೆಳೆದವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಅವರ ದೋಸ್ತಿ ಹಾಳು ಮಾಡಿದೆ.

ಇದೆಲ್ಲದರ ಹಿಂದೆ ಇರುವುದು ಸತ್ಯಾಸತ್ಯತೆ ಹಾಗೂ ವಿಶ್ವಾಸರ್ಹತೆಯ ಪ್ರಶ್ನೆ. ನಾವು ಯಾವ ಸುದ್ದಿಗಳನ್ನು ಹೆಚ್ಚು ನಂಬುತ್ತೇವೆ?  - ಪತ್ರಿಕೆ, ಟೀವಿ, ರೇಡಿಯೋ ದಲ್ಲಿ ಬಂದ ವಿಷಯಗಳ ನ್ನೋ ಅಥವಾ ನವ ಮಾಧ್ಯಮಗಳಲ್ಲಿ ಹರಿದಾಡುವ ವಿಷಯಗಳನ್ನೋ?
ಪತ್ರಿಕೆಗಳಲ್ಲಿ ಒಂದು ವಿಷಯ ಕಣ್ತಪ್ಪಿನಿಂದಾಗಿ ಛಾಪಿಸಿದಾಗ ನ್ಯಾಯಾಲಕ್ಕೆ ಓಡುವ ನಾವು ನವ ಮಾಧ್ಯಮಗಳಲ್ಲಿನ ತಪ್ಪು ಗಳನ್ನು ಅಷ್ಟೇ ತೀವೃವಾಗಿ ವಿರೋಧಿಸುತ್ತೇವೆಯೇ? ಎಲ್ಲದಕ್ಕೂ ಸಂಪಾದಕರು ಅಥವಾ ವರದಿಗಾರರನ್ನು ಹೊಣೆ ಮಾಡುವ ನಾವು ವಾಟ್ಸಪ್ಪಿನಲ್ಲಿ ಬಂದ ಸುದ್ದಿಯ ಮೂಲವನ್ನು ಹುಡುಕುವ ಪ್ರಯತ್ನ ಮಾಡುತ್ತೇವೆಯೇ?
ಅದ ರ ಜವಾಬ್ದಾರಿಯನ್ನು ಅವರಿಗೆ ಅಂಟಿಸುತ್ತೇವೆಯೇ? ಆ ಸುದ್ದಿಯನ್ನು ಹುಟ್ಟು ಹಾಕಿದವರಿಂದ ಉತ್ತರಗಳನ್ನು ಬಯಸುತ್ತೆವೆಯೇ? ಇವು ನಮಗೆ ನಾವೇ ಕೇಳಿಕೊಳ್ಳ ಬೇಕಾದ ಪ್ರಶ್ನೆಗಳು.

ಸೈಬರ್ ಜಗಳ
ವಿಚಾರ ವ್ಯತ್ಯಾಸ ದಿಂದ ಸಂಬಂಧ ಗಳು ಹಾಳಾಗುವುದು ಹೊಸದೇನಲ್ಲ. ಸವಣೂರು ನವಾಬನ ಆಸ್ತಿಯ ಬಗ್ಗೆ ವಾದ ಮಾಡಿ ಅಣ್ಣ – ತಮ್ಮ ಬೇರೆಯಾದರು ಎನ್ನುವುದು ನಮ್ಮ ಊರಿನ ಕಡೆಯ ಹಳೆಯ ಗಾದೆ ಮಾತು. ಆದರೆ ನಮ್ಮ ಅರಿವು ಹೆಚ್ಚಿದಂತೆ, ಎಲ್ಲರಿಗೂ ಸಾಕಷ್ಟು ಮಾಹಿತಿ ಹೆಚ್ಚು ದೊರಕಿದಂತೆ ಇಂತಹ ಅಕಾರಣ ಜಗಳಗಳು ಜಾಸ್ತಿ ಆಗುತ್ತಿವೆ. ಇದು ಕಳವಳದ ಸಂಗತಿ.
ಫೇಸುಬುಕ್ಕಿನಿಂದಾಗಿ ಅನೇಕ ವರ್ಷಗಳಿಂದ ಕಳೆದು ಹೋದ ಸುಮಾರು ಸ್ನೇಹಿತರನ್ನು ಪಡೆದುಕೊಂಡೆ ಎನ್ನುವ ಮಾತನ್ನು ನಾವು ಇಲ್ಲಿಯವರೆಗೆ ಕೇಳುತ್ತಿದ್ದೆವು. ಫೇಸುಬುಕ್ಕಿನ ಲ್ಲಿ ನಾನು ಪ್ರಕಟಿಸಿದ ನನ್ನ ವೈಯಕ್ತಿಯ
ಅಭಿಪ್ರಾಯಗಳಿಂದ ಅನೇಕ ವರ್ಷಗಳಿಂದ ನನ್ನ ತುಂಬ ಹತ್ತಿರದ ಸ್ನೇಹಿತರನೇಕರನ್ನು ನಾನು ಕಳೆದುಕೊಂಡೆ ಎನ್ನುವ ಮಾತು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.
ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವುದು, ತಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸುವವರನ್ನು ದೇಶಧ್ರೋಹಿಗಳು ಎಂದು ಪ್ರತಿಬಿಂಬಿಸುವುದು ಅಪಾಯಕಾರಿ. ಇದು ಜನತಂತ್ರ ವಿರೋಧಿ ನಿಲುವು. ಬಲ -ಎಡಪಂಥೀಯರಿಗಾಗಲೀ, ಮಧ್ಯಮ ಮಾರ್ಗಿಗಳಾಗಲೀ ಎಲ್ಲರಿಗೂ ತಮ್ಮ -ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕು. ಇದನ್ನು ನಾವು ನೆನಪಿಡಬೇಕು.

ತಪ್ಪುಗಳು
ಕೆಲವು ಉದಾಹರಣೆಗಳ ಮೂಲಕ ಇದನ್ನು ನೋಡೋಣ. ಭಾರತದ ರಾಷ್ಟ್ರಗೀತೆಯನ್ನು ರವೀಂದ್ರನಾಥ ಠಾಕೂರರು ಬರೆದದ್ದು ಇಂಗ್ಲಂಡ್ ದೊರೆಯನ್ನು ಮೆಚ್ಚಿಸಲಿಕ್ಕಾಗಿ ಎನ್ನುವ ಸಂದೇಶವೊಂದು ವಾಟ್ಸಪ್ಪು- ಫೇಸುಬುಕ್ಕಿನ ಗೋಡೆಗಳಲ್ಲಿ ಕೆಲ ವರ್ಷಗಳ ಹಿಂದೆ ಓಡಾಡುತ್ತಿತ್ತು. ಈಗ ಯುನೆಸ್ಕೋ ಸಂಘಟನೆಯು ಜನಗಣ ಮನವು ಅತಿ ಶ್ರೇಷ್ಠ ರಾಷ್ಟ್ರ ಗೀತೆ ಯೆಂದು ಪ್ರಶಸ್ತಿ ನೀಡಿ ಗೌರವಿಸಿದೆ, ಅದು ನಮ್ಮ ಸಕಲ ಭಾರತೀಯ ಮನಸ್ಸೇ ಒಂದು ವ್ಯಕ್ತಿಯ ರೂಪದಲ್ಲಿ ಅವತರಿಸಿದೆ. ಅದಕ್ಕೆ ನಾನು ನಮಸ್ಕರಿಸುತ್ತೇನೆ ಎನ್ನುವ ಅರ್ಥದ ಸಂದೇಶ ಓಡಾಡುತ್ತಿದೆ. ತಮಾಷೆಯಂದರೆ ಹಿಂದಿನ ಸಂದೇಶವನ್ನು ಒಬ್ಬರಿಗೊಬ್ಬರು ಕಳಿಸಿದವರೇ ಇದನ್ನೂ ಕಳಿಸುತ್ತಿದ್ದಾರೆ. ಈ ಎರಡರಲ್ಲಿ ಯಾವುದಾದರೂ ಒಂದು ಸರಿ ಇರಬೇಕಲ್ಲವೇ? ಇಂತಹುದೇ ತದ್ ವಿರುದ್ಧ ವಿಷಯಗಳು ಯಾವುದಾದರೂ ಪತ್ರಿಕೆ ಯಲ್ಲಿ ಪ್ರಕಟವಾಗಿದ್ದರೆ ಆ ಸಂಪಾದಕನ ಗತಿ ಏನಾಗಿರುತ್ತಿತ್ತು?

ಎನ್ ಡಿ ಎ ಸರಕಾರವು ಯೋಜನಾ ಆಯೋಗವನ್ನು ಮುಚ್ಚಿ ನೀತಿ ಆಯೋಗವನ್ನು ಆರಂಭಿಸಿದಾಗ ಅದನ್ನು ಕೆಲವರು ಟೀಕಿಸಿದರು. ಎಂಬತ್ತರ ದಶಕದಲ್ಲಿ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿಯವರು ಸಹ ಯೋಜನಾ ಆಯೋಗವನ್ನು ಮುಚ್ಚಿದ್ದರು ಎಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ದಾಖಲಿಸಿದೆ. ಇದನ್ನು ಕೆಲವರು ತೀವೃವಾಗಿ ವಿರೋಧಿಸಿದರು. ಅದಕ್ಕೆ ಪರ- ವಿರೋಧಗಳು ಶುರುವಾಗಿ ದೊಡ್ಡ ಚರ್ಚೆ ನಡೆಯಿತು. ಕೊನೆಗೆ ದೆಹಲಿಯಲ್ಲಿ ನ ಹಿರಿಯ ವಕೀಲರೊಬ್ಬರು ಅದಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಮಾಹಿತಿ ನೀಡಿದ ಮೇಲೆ ಅದು ಅಲ್ಲಿಗೆ ನಿಂತಿತು.

ಹೈದರಾಬಾದು ವಿಶ್ವವಿದ್ಯಾಲಯದಲ್ಲಿ ರೊಹಿತ ವೆಮುಲಾ ಅವರು ವ್ಯವಸ್ಥೆಯ ಕ್ರೂರತೆಗೆ ಬಲಿಯಾದರು ಎನ್ನುವ ಸುದ್ದಿ ಬಂದಾಗ ನನ್ನ ಸ್ನೇಹಿತರೊಬ್ಬರು ತುರ್ತು ಪರಿಸ್ಥಿತಿಯ ಕಾಲದಲ್ಲಿ ಪೋಲಿಸ್ ಕ್ರೂರತೆ ಬಲಿಯಾದರು ಎನ್ನಲಾದ ಕೇರಳದ ರಾಜನ್ ವಾರಿಯರ್ ಅವರ ಕತೆಯನ್ನು ಜಾಲತಾಣವೊಂದರಲ್ಲಿ ಹಾಕಿದ್ದರು. ಆ ಎರಡೂ ಘಟನೆಗಳು ಬೇರೆ ಬೇರೆಯಾಗಿದ್ದು, ಅವುಗಳನ್ನು ಹೋಲಿಸಬಾರದು ಎಂದು ಅವರೊಂದಿಗೆ ಜಗಳಕ್ಕೆ ಬಿದ್ದರು. ಈಗ ಇಷ್ಟೆಲ್ಲಾ ಮಾತನಾಡುವ ನೀವು ಆವಾಗ ಯಾಕೆ ಸುಮ್ಮನಿದ್ದಿರಿ ಎಂದು ಕೇಳಿದರು. ಆ ಘಟನೆಯನ್ನು ಪ್ರಸ್ತಾಪಿಸಿದ ಹಿರಿಯರು ಯಾವುದೇ ಪಕ್ಷಕ್ಕೆ ಸೇರದವರಾಗಿರಲಿಲ್ಲ ವಾದರೂ ಅವರನ್ನು ನೀವು ಈ ಪಕ್ಷದವರು, ಅದಕ್ಕೇ ಇದನ್ನು ವಿರೋಧಿಸುತ್ತಿದ್ದೀರಿ ಎಂದು ಆರೋಪಿಸಿದರು. 
ಎರಡೂ ಘಟನೆಗಳಲ್ಲಿ ಯುವ ಜನರು ವ್ಯವಸ್ಥೆಯ ಕಾಲ ಕೆಳಗೆ ಸಿಕ್ಕು ಜಜ್ಜಿ ಹೋಗಿದ್ದರು, ಎನ್ನುವ ಸರಳ ಸತ್ಯವಾಗಲೀ, ಎರಡೂ ಬಾರಿಯೂ ನಾಗರಿಕರಿಗೆ ಸರಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಇದೆ ಎನ್ನುವ ತರ್ಕ ವಾಗಿಲೀ ಎರಡೂ ಕಡೆಯವರಿಗೆ ಹೊಳೆಯಲಿಲ್ಲ. ಹಿಂಸೆ ಅಥವಾ ದುರಾಚಾರ ದ ನೋವನ್ನು ಪ್ರತಿ ಹಿಂಸೆ ಕಡಿಮೆ ಮಾಡುವುದಿಲ್ಲ ಎಂದು ಇಬ್ಬರಿಗೂ ಅನ್ನಿಸಲಿಲ್ಲ.

ಇತರ ಜಾಲ ತಾಣಗಳು ಹಾಗಿರಲಿ. ದಿನದಿಂದ ದಿನಕ್ಕೆ ವಿಶ್ವಾಸರ್ಹತೆ ಹೆಚ್ಚಿಸಿಕೊಳ್ಳುತ್ತಿರುವ, ಸಾವರ್ಜನಿಕರೇ ಸಂಪಾದಕರಾಗಿರುವ ವಿಕಿಪಿಡಿಯಾದ ಉದಾಹರಣೆ ಯನ್ನೇ ತೆಗೆದುಕೊಳ್ಳೋಣ. ಕೆಲವು ವರ್ಷಗಳ ಹಿಂದೆ ಜ್ಞಾನಪೀಠ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂದು ಯಾರೋ ಬರೆದಿದ್ದನ್ನು ನೋಡಿದ  ಹಿರಿಯ ಪತ್ರಕರ್ತ ನಲ್ಲೂರು ಇಸ್ಮಾಯಿಲ್ ಅವರು ಅದು ಖಾಸಗಿ ಪ್ರತಿಷ್ಟಾನ ವೊಂದು ನೀಡುವ ಪ್ರಶಸ್ತಿ ಎಂದು ತಿದ್ದಿದರು. ಆದರೆ ಅದನ್ನು ಸರಕಾರಿ ಪ್ರಶಸ್ತಿ ಎಂದು ತಿದ್ದಲಾಯಿತು. ಇವರು ಮತ್ತೆ ತಿದ್ದಿದರು. ಅದನ್ನು ಮತ್ತೆ ತಿದ್ದಲಾಯಿತು. ಈಗ ಅದು ಸರಿಯಾಗಿದೆ.

ಈ ಜಾಲತಾಣಗಳಲ್ಲಿನ ಇಂತಹ ಜಗಳಗಳನ್ನು ನೋಡಿದಾಗ, ಎಲ್ಲರೂ ತಮ್ಮದೇ ಸರಿ ಎಂದು ವಾದಿಸತೊಡಗಿದಾಗ ನನ್ನಲ್ಲಿ ಈ ಪ್ರಶ್ನೆ ಮೂಡುತ್ತದೆ. ಇವಕ್ಕೆ ಸಾಮಾಜಿಕ ಜಾಲತಾಣಗಳು ಎನ್ನಬೇಕೇ? ಎಲ್ಲರೂ ತಮ್ಮ ಮೂಗಿನ ನೇರಕ್ಕೇ ಮಾತಾಡುವುದಾದರೆ ಇವಕ್ಕೆ ವೈಯಕ್ತಿಕ ಜಾಲತಾಣಗಳು ಎನ್ನಬಾರದೋ ಅನ್ನಿಸುತ್ತದೆ. ಹಳ್ಳಿಯ ಚಹಾ ಅಂಗಡಿಯಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಇರುವಷ್ಟು ಅವಕಾಶ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುತ್ತಿಲ್ಲ. ಬಹುಶಃ ತಮ್ಮ ಪ್ರತಿವಾದಿ ನಮ್ಮ ಎದುರಿಗೆ ಭೌತಿಕವಾಗಿ ಇಲ್ಲ ಎನ್ನುವುದು ನಮ್ಮನ್ನು ತುಂಬ ಅಮಾನವೀಯವಾಗಿ ಮಾತಾಡುವಂತೆ ಪ್ರೇರೇಪಿಸುತ್ತದೆ ಅನ್ನಿಸುತ್ತದೆ.

ಜ್ಞಾನ ವೆನ್ನುವುದು ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡದಿದ್ದರೆ ಅದು ಜ್ಞಾನವೇ ಅಲ್ಲ, ಎನ್ನುವ ಸಂಸ್ಕೃತದ ಮಾತೊಂದಿದೆ. ನಾವು ಈಗ ಸಾಮಾಜಿಕ ಮಾಧ್ಯಮ ಅಥವಾ ವಿವಿಧ ಜಾಲ ತಾಣಗಳಿಂದ

ಕೆಲವು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ನ್ಯಾಯಾಧೀಶರೊಬ್ಬರು ಪತ್ರಕರ್ತರ ಬಗ್ಗೆ ಹೇಳಿದ ಮಾತೊಂದು ವಿವಾದಕ್ಕೆ ಈಡು ಮಾಡಿತ್ತು. `` ಈ ದೇಶದಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಹಾಗೂ ಯಾವುದೇ ತರಬೇತಿ ಇಲ್ಲದೇ ಮಾಡಬಹುದಾದ ಕೆಲಸವೆಂದರೆ ಪತ್ರಿಕೋದ್ಯಮ’’  ಎಂದು ಅವರು ಫರಮಾನು ಕೊಟ್ಟರು. ಆ ಕಾರ್ಯಕ್ರಮದಲ್ಲಿ ಇದ್ದ ಹಿರಿಯ ಪತ್ರಕರ್ತ ಆನಂದ ಯಮನೂರು ಅವರು ಅದನ್ನು ತೀವೃವಾಗಿ ವಿರೋಧಿಸಿದರು. ಅಲ್ಲಿದ್ದ ವಕೀಲರಿಗೂ ನಮ್ಮವರಿಗೂ ಝಟಾಪಟಿ ನಡೆಯಿತು. ಅದು ನಡೆಯುತ್ತಲೆ ಇರುತ್ತದೆ. ಅದರಲ್ಲಿ ಏನೂ ಆಶ್ಚರ್ಯ ಇಲ್ಲ. ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಆಯಿತು. ಈ ಪೇಪರಿನವರಿಗೆ ಯಾವುದೇ ತರಬೇತಿ ಇರೊದಿಲ್ಲ. ಬೇಕಾಗಿಯೂ ಇಲ್ಲ, ಎನ್ನುವಂತಹ ಹಗುರವಾದ ಮಾತುಗಳನ್ನು ಕೆಲವು ಜನ ಆಡುತ್ತಲೇ ಇರುತ್ತಾರೆ. ಅದರ ಮಧ್ಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಇಂತಹ ತರಬೇತಿಗಳನ್ನು ಏರ್ಪಡಿಸಿದ್ದು ಅಭಿನಂದನಾರ್ಹ.

ರೋಹಿಣಿ ಅವರು ಹಾಗೂ ಶಂಕರಪ್ಪ ನವರು ನನಗೆ ಆಹ್ವಾನ ನೀಡಿದಾಗ ಜಾತ್ರೆಗೆ ಹೊರಟ ಮಗುವಿನಂತೆ ನಾನು ಕೈತಟ್ಟಿ ಖುಷಿ ಪಟ್ಟೆ. ಆದರೆ ಈ ಕಾರ್ಯಕ್ರಮದಲ್ಲಿ ಡಾ. ನಾರಾಯಣ ಗಟ್ಟಿ ಅವರಂತಹ ಚಿಂತಕರೂ, ದೇವ ಪತ್ತಾರರಂತಹ ಬಹು ವಿಧದ ಓದಿನವರೂ ಮಾತಾಡಿದ್ದಾರೆ. `ವ್ಯಾಸೋಚ್ಛಿಷ್ಟಂ ಜಗತ್ ಸರ್ವಂಎಂಬಂತೆ ಅವರು ಮಾತಾಡಿದ ಮೇಲೆ ಉಳಿದದ್ದೇನು ಅಂತಲೂ ಅನ್ನಿಸುತ್ತದೆ. ಆದರೆ ಅನ್ನಿಸಿದ್ದನ್ನು ಹೇಳಿದ ಮೇಲೆ ಮನಸು ಹಗುರವಾಗುತ್ತಿದೆ.

``ತೀರ್ಥಯಾತ್ರೆ ಎಂದರೆ ಆಪ್ತೇಷ್ಟರ ಭೇಟಿಯಲ್ಲದೇ ಇನ್ನೇನು’’ ಎನ್ನುವ ಸುಭಾಷಿತ ವಿದೆ. ಅಂತೆಯೇ ಇಲ್ಲಿಗೆ ಬಂದು ನಿಮ್ಮೆಲ್ಲರನ್ನು ಭೇಟಿ ಆಗುತ್ತಿರುವುದು ನನಗೆ ತುಂಬ ಖುಷಿಯಾಗಿದೆ.

ಅಕಾಡೆಮಿ ಅಧ್ಯಕ್ ಸಿದ್ಧರಾಜ್ ಸರ್, ಸದಸ್ಯ ಗುಡಿಹಳ್ಳಿ ನಾಗರಾಜ ಸರ್, ಕಾರ್ಯದರ್ಶಿ ಶಂಕರಪ್ಪವಾರ್ತಾಧಿಕಾರಿಗಳಾದ ಕೆ. ರೋಹಿಣಿ, ಜಿಲ್ಲಾ ಪತ್ರಕರ್ತ ರ ಸಂಘದ ಪದಾಧಿಕಾರಿಗಳು, ಸದಸ್ಯರುಸಂಪನ್ಮೂಲ ವ್ಯಕ್ತಿಗಳು, ಭಾಗವಹಿಸಿದವರು, ಹಾಗೂ ಕಾರ್ಯಾಗಾರಕ್ಕೆ ಕಾರಣರಾದ ಇತರ ಎಲ್ಲರಿಗೂ ಧನ್ಯವಾದಗಳು.

---



ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?


ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?
ಸುಮಾರು ಹತ್ತು ವರ್ಷದ ಹಿಂದಿನ ಮಾತು. ಅಮೇರಿಕೆಯ ಫ್ಲೊರಿಡಾ ರಾಜ್ಯದ ನಗರವೊಂದರ ಪುರಭವನದಲ್ಲಿ ಒಂದು ಸಂಜೆ ಊರಿನ ಜನರೆಲ್ಲಾ ಖುಷಿಯಿಂದ ಮೆರೆದಿದ್ದರು. ಅದು ಹೊಸದಾಗಿ ಚುನಾಯಿತರಾದ ಮಹಾ ಪೌರರನ್ನು ಅಭಿನಂದಿಸುವ ಕಾರ್ಯಕ್ರಮ. ರೋಟರಿ ಇಂಟರನ್ಯಾಷನಲ್ ಸಂಸ್ಥೆಯ `ಜಿಎಸ್ಈ’ ಸಾಂಸ್ಕ್ರತಿಕ ವಿನಿಮಯದ  ಅಂಗವಾಗಿ ಭಾರತದಿಂದ ಅಲ್ಲಿಗೆ ತೆರಳಿದ್ದ ನಮ್ಮ ಐದು ಜನರ ತಂಡಕ್ಕೂ ಅಲ್ಲಿಗೆ ಆಹ್ವಾನವಿತ್ತು. ಆದರೆ ಅಲ್ಲಿಗೆ ಮಹಾಪೌರರು ಆಗಮಿಸಿ ಕೆಲವು ನಿಮಿಷಗಳಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ನಮಗೋ ಆಶ್ಚರ್ಯ. “ಮುಖ್ಯ ಭಾಷಣಕಾರರು ಇನ್ನೂ ಬಂದಿಲ್ಲ, ಇನ್ನು ಐದು- ಹತ್ತು ನಿಮಿಷಗಳಲ್ಲಿ ಬಂದು ಬಿಡುತ್ತಾರೆ,’’ ಎಂದು ನಮ್ಮ ಅತಿಥೇಯರಾದ ಪ್ರೊ. ಕಾರ್ಲ್ ಬೆಕಮೆನ್ ತಿಳಿಸಿದರು. `ಸಮಾರಂಭಗಳು ತಡವಾಗೋದು ನಮಗೇನೂ ಹೊಸದಲ್ಲ ಬಿಡಿ. ಆದರೆ ನಮ್ಮಲ್ಲಿ ರಾಜಕಾರಣಿಗಳೇ ತಡವಾಗಿ ಬರೋದು. ಇಲ್ಲಿ ರಾಜಕಾರಣಿಗಳು ಬಂದಮೇಲೂ ನೀವು ಬೇರೆಯವರಿಗೆ ಕಾಯುತ್ತಿದ್ದೀರಲ್ಲಾ, ಅದು ಮಜಾ ಅನ್ನಿಸಿದೆ’ ಅಂದೆ ನಾನು. `ಅಯ್ಯೋ ಇಂದಿನ ಅತಿಥಿಗಳು ರಾಜಕಾರಣಿಗಿಂತಲೂ ಮುಖ್ಯವಾದವರು. ಹೇಗೆ ಅಂತ ಇನ್ನೊಂದು ಸ್ವಲ್ಪ ಸಮಯದಲ್ಲಿ ನಿಮಗೇ ಗೊತ್ತಾಗತ್ತೆ ಇರಿ,’ ಅಂತ ಅವರು ನಸು ನಕ್ಕರು.

ಆಗ ಬಂದವರು ಜೆಫ್ ಕ್ಲಿಂಟ್. “ಸುಮಾರು ಹದಿನೈದು ನಿಮಿಷ ನನಗೆ ಸಕಾರಣವಾಗಿ ತಡವಾಗಿದೆ. ಅದಕ್ಕೆ ಕ್ಷಮೆ ಇರಲಿ,’’ ಎನ್ನುತ್ತಾ ಮಾತು ಆರಂಭಿಸಿದರು. “ಇಲ್ಲಿಗೆ ಬರುವ ಮೊದಲು ನಾನು ನನ್ನ ಮಗನನ್ನು ಶಾಲೆಯಿಂದ ಕರೆತರಲು ಹೋಗಿದ್ದೆ. ಅವನು “ನಾನು ನನಗೆ ತುಂಬಾ ಇಷ್ಟವಾಗುವ ವ್ಯಕ್ತಿಯ ಚಿತ್ರ ಬರೆಯುತ್ತಿದ್ದೇನೆ, ಸ್ವಲ್ಪ ಕಾಯಿರಿ’’ ಅಂತಂದ. ನಾನು ನನ್ನದೇ ಚಿತ್ರ ಬರೆಯುತ್ತಿದ್ದಾನೇನೋ ಅಂದು ಕೊಂಡು ಒಳಗೋಳಗೇ ಸಂಭ್ರಮಿಸುತ್ತಿದ್ದರೆ, ಅವನು ತನ್ನ ಫುಟಬಾಲ್ ಕೋಚಿನ ಚಿತ್ರ ತೆಗೆದ. ಇಷ್ಟೊತ್ತು  ಕಾಯ್ದಿದ್ದಕ್ಕೂ ಒಳ್ಳೆ ಫಲ ಸಿಕ್ಕಿದಂತಾಯಿತು’’ ಎಂದು ನಗೆ ಚಟಾಕಿ ಹಾರಿಸಿದರು.

govtshlಆ ನಗರದ ಯಶಸ್ವೀ ಉದ್ದಿಮೆದಾರರೂ, ಕೋಟ್ಯಾಧೀಶ್ವರರೂ, ಮಾಜಿ ಸಂಸತ್ ಸದಸ್ಯರ ಮಗನೂ ಆಗಿದ್ದ ಅವರು ಸ್ವಾರಸ್ಯಕರ ಕತೆಯೊಂದನ್ನು ಹೇಳಿದರು. ಕೆಲವು ತಿಂಗಳುಗಳ ಹಿಂದೆ ಈ ನಗರದ ಮಹಾ ಪೌರರ ಚುನಾವಣೆ ಘೋಷಣೆಯಾದಾಗ ನಾನು ಅದರಲ್ಲಿ ಸ್ಪರ್ಧಿಸಬೇಕು ಎಂದು ನನ್ನ ಅನೇಕ ಹಿತೈಷಿಗಳೂ, ಸ್ನೇಹಿತರೂ, ನನ್ನನ್ನು ಒತ್ತಾಯಿಸಿದರು. ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರಂತೂ ತಮ್ಮ ಪಕ್ಷದ ಸಭೆಗಳಲ್ಲಿ ನನ್ನ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಒಂದು ಕೈ ನೋಡೇ ಬಿಡೋಣ ಅಂತ ನನಗೂ ಅನ್ನಿಸತೊಡಗಿತು. ನನಗೀಗ ಸುಮಾರು 45 ವರ್ಷ. ಹೀಗೆ ರಾಜಕಾರಣದಲ್ಲಿ ಮುಂದುವರೆದರೆ ಮುಂದೆ ದೇಶದ ಸಂಸತ್ ಸದಸ್ಯನಾಗ ಬಹುದು, ಅಂತಲೂ ಅನ್ನಿಸಿತು.

ರಾತ್ರಿಯ ಊಟದ ಸಮಯದಲ್ಲಿ ನನ್ನ ಕುಟುಂಬದ ಸದಸ್ಯರೆದುರು ಇದನ್ನು ಘೋಷಿಸಿದೆ. ಆದರೆ ಪ್ರೌಡಶಾಲೆ ಯಲ್ಲಿ ಇರುವ ನನ್ನ ಹಿರಿಯ ಮಗಳು ತಮ್ಮ ಶಾಲೆಯ ಆಡಳಿತ ಮಂಡಳಿಯ ಚುನಾವಣೆ ಇಷ್ಟರಲ್ಲೇ ಬರಲಿದೆ ಎಂದೂ, ನಾನು ನಗರ ಪಾಲಿಕೆ ಚುನಾವಣೆ ಗಿಂತ ಅದನ್ನು ಎದುರಿಸುವುದೇ ಒಳ್ಳೆಯದೇನೋ ಎಂದು ಸೂಕ್ಷ್ಮವಾಗಿ ಸೂಚಿಸಿದಳು. “ನನ್ನ ಪ್ರಕಾರ ಮಹಾಪೌರನಾಗುವುದು ಸರಳ. ಶಾಲೆ ನಡೆಸುವುದು ಕಷ್ಟ. ಉದ್ದಿಮೆಯಲ್ಲಿ ಇಷ್ಟೊಂದು ಯಶಸ್ಸು ಗಳಿಸಿದ ನಿಮ್ಮಂಥವರು ಶಿಕ್ಷಣ ಕ್ಷೇತ್ರದಲ್ಲೂ ಕೈಆಡಿಸಿ ನೋಡಿ. ಅಲ್ಲಿಯ ಸವಾಲುಗಳನ್ನು ಎದುರಿಸಲು ನಿಮ್ಮಂಥವರ ಜರೂರತ್ತು ಇರಬಹುದೇನೋ’’ ಅಂತ ಬೇರೆ ಒಗಟಿನ ಮಾತು ಹೇಳಿಬಿಟ್ಟಳು.

“ನಮ್ಮ ಮಗಳು ದೂಡ್ಡವಳಾಗುತ್ತಿದ್ದಾಳೆ. ಅವಳ ಸೂಚನೆ ಯನ್ನೂ ನೀವಿನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಮೇಲು,’’ ಎಂದು ನನ್ನ ಹೆಂಡತಿ ಕಾರ್ಲಾ ಹೇಳಿದಳು. ಕಚೇರಿಯಲ್ಲಿ ನನಗೆ ಆತ್ಮೀಯರಾದವರೊಬ್ಬರು “ನಾನು ನಿನ್ನ ಜಾಗದಲ್ಲಿ ಇದ್ದರೆ ಮಗಳ ಮಾತನ್ನೇ ಕೇಳುತ್ತಿದ್ದೆ’’ ಎಂದು ಹೇಳಿದರು. ಮಹಾಪೌರನಾಗಿ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾ, ಹಿಂದೆ ಮುಂದೆ ಮೂರು ನಾಕು ಕಾರುಗಳ ಜಾತ್ರೆಯಲ್ಲಿ ಮೆರೆಯುವ ಕನಸು ಕಾಣತೊಡಗಿದ್ದ ನನಗೆ `ಇದೇನಪ್ಪಾ, ನಮ್ಮವರದೇ ನನಗೆ ಬೆಂಬಲವಿಲ್ಲವಲ್ಲಾ’ ಎಂದು ಕೊಂಡೆ. ಕುಟುಂಬ ಸದಸ್ಯರೊಡನೆ ಎರಡು ಮೂರು ಬಾರಿ ಚರ್ಚೆ ನಡೆಸಿದರೂ ಗೊಂದಲ ಬಗೆ ಹರಿಯಲಿಲ್ಲ.  ಕೊನೆಗೆ ನಮ್ಮ ತಂದೆ ಯನ್ನು ಭೇಟಿ ಯಾಗಿ ಈ ಸಮಸ್ಯೆಯ ಪರಿಹಾರ ಕೇಳೊಣ ಎಂದುಕೊಂಡೆವು. ನಮ್ಮ ತಂದೆ ತಾಯಿ ವಾಸವಾಗಿರುವ ನಮ್ಮ ಹಳ್ಳಿಯ ತೋಟದ ಮನೆಗೆ ಹೋಗುವ ನಿರ್ಧಾರ ಮಾಡಿದೆವು. ಬಹಳ ದಿನದ ನಂತರ ಫ್ಯಾಮಿಲಿ ಪಿಕ್ ನಿಕ್ ನ ಅವಕಾಶ ಸಿಕ್ಕಿದೆ ಎಂದು ನನ್ನ ಮೂವರು ಮಕ್ಕಳೂ ನಮ್ಮ ಜೊತೆ ಬರುವ ನಿರ್ಧಾರ ಮಾಡಿದರು. ಒಂದು ಇಡೀ ದಿನದ ಹೆದ್ದಾರಿ ಪ್ರಯಾಣದ ನಂತರ ನಮ್ಮೂರಿಗೆ ಹೋದೆವು. ನಮ್ಮ ಹಟಾತ್ ಭೇಟಿಯಿಂದ ನಮ್ಮಪ್ಪ – ಅಮ್ಮ ಖುಷಿಯಾದರು. ಮಕ್ಕಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ.

ಸಂಜೆ ವಾಕಿಂಗ್ ಹೋದಾಗ ನಾನು ನಿಧಾನವಾಗಿ ಅಪ್ಪ ನ ಮುಂದೆ ಈ ವಿಷಯ ತೆಗೆದೆ. “ಈ ವರ್ಷ ಚುನಾವಣೆ ನಿಲ್ಲಬೇಕೆಂದಿದ್ದೇನೆ. ನನ್ನ ಮಾನಸಿಕ ತಯಾರಿ ಆರಂಭವಾಗಿದೆ. ನಮ್ಮ ಬಿಸಿನೆಸ್ ಜವಾಬ್ದಾರಿ ಯನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದೇನೆ. ಚುನಾವಣೆ ನಿಲ್ಲುವುದೇನೋ ಖಚಿತ. ಆದರೆ ಯಾವ ಚುನಾವಣೆ ಎನ್ನುವದೇ ಸಮಸ್ಯೆಯಾಗಿದೆ. ನನ್ನ ನಗರವೋ, ನನ್ನ ಮಕ್ಕಳ ಶಾಲೆಯೋ? ಯಾವದನ್ನು ಆಯ್ದುಕೊಳ್ಳಲಿ?’’ ಎಂದೆ. “ಇದರಲ್ಲಿ ಸಮಸ್ಯೆ ಏನಿದೆ? ನೀನು ಶಾಲೆಯನ್ನೇ ಆಯ್ದುಕೊಳ್ಳಬೇಕು,’’ ಎಂದು ಅವರು ನಕ್ಕರು. “ನಗರವನ್ನು ನೋಡಿಕೊಳ್ಳಲು ಬಹಳ ಜನ ಇದ್ದಾರೆ. ನಿಮ್ಮ ಹುಡುಗರ ಶಾಲೆಯನ್ನು ನೀನೇ ನೋಡಬೇಕು, ಅಂತಹ ಗುರುತರ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕುವುದು ತರವೇ?’’ ಎಂದು ನನ್ನನ್ನೇ ಪ್ರಶ್ನಿಸಿದರು.

“ಕೊನೆಗೆ ನಾನು ಶಾಲೆ ಆಡಳಿತ ಮಂಡಳಿ ಚುನಾವಣೆ ನಿಂತು ಗೆದ್ದೆ. ಇತರ ಸದಸ್ಯರ ಸಹಯೋಗದಿಂದ ಅದರ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತಂದೆವು. ಇದರ ಬಗ್ಗೆ ನನಗೆ ನಿಜವಾಗಿಯೂ ತೃಪ್ತಿ ಇದೆ. ಇಂತಹ ಆಮೂಲಾಗ್ರ ಬದಲಾವಣೆಗಳನ್ನು ನಾನು ನಗರದ ಆಡಳಿತ ಮಂಡಳಿಯಲ್ಲಿಯೂ ಮಾಡಲು ಸಾಧ್ಯವಿತ್ತೋ ಇಲ್ಲವೋ. ಇದ್ದರೂ ಸಹ ಇಷ್ಟು ತೃಪ್ತಿ ಸಿಗುತ್ತಿರಲಿಲ್ಲ ಅನ್ನಿಸುತ್ತದೆ.  ನನ್ನ ಮಗಳು, ಹೆಂಡತಿ, ತಂದೆ ಹಾಗು ಇತರ ಸ್ನೇಹಿತರು ಶಾಲೆಗೆ ಯಾಕೆ ಆದ್ಯತೆ ನೀಡುವಂತೆ ಒತ್ತಾಸೆ ಮಾಡಿದರು ಎನ್ನುವುದು ನಿಧಾನವಾಗಿ ನನಗೆ ಹೊಳೆಯಲಾರಂಭಿಸಿತು,’’ ಅಂತ ಅವರು ಭಾಷಣ ಮುಗಿಸಿದರು.
“ಜೆಫ್ ಅವರೇನಾದರೂ ಚುನಾವಣೆಗೆ ನಿಂತಿದ್ದರೆ ನಾನು ಚುನಾವಣೆಯ ಸಮೀಪವೂ ಬರುತ್ತಿರಲಿಲ್ಲ,’’ ಎನ್ನುತ್ತ ಹೊಸ ಮಹಾಪೌರರು ಮಾತು ಶುರುಮಾಡಿದರು. “ಅವರಂಥವರು ಶಾಲಾ ಆಡಳಿತ ಮಂಡಳಿಗಳಲ್ಲಿ ಇದ್ದರೆ ನಗರ ಪಾಲಿಕೆಯ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ,’’ ಎಂದರು.

baadami ಇಡೀ ಘಟನೆ ಬಗ್ಗೆ ನನಗೆ ಸಂದೇಹ ಹುಟ್ಟತೊಡಗಿತು. ಇದು ಯಾರೋ ಇಬ್ಬರು ಸಾಹುಕಾರರು ತಮ್ಮ ತಮ್ಮನ್ನು ಹೊಗಳುವ ಸ್ಪರ್ಧೆ ಅಷ್ಟೇ. ಅದರಲ್ಲೂ ಭಾರತದಿಂದ ಬಂದ ಅತಿಥಿಗಳು ಇದ್ದಾರೆ ಎಂದ ಮೇಲೆ ಇನ್ನೂ ಹೆಚ್ಚು ನೈಸಾಗಿ ಮಾತಾಡುತ್ತಿರಬೇಕು ಎಂದುಕೊಂಡೆ. ಆದರೆ ಸಮಾರಂಭದ ನಂತರ ಪ್ರೊ. ಕಾರ್ಲ್ ಬೆಕಮೆನ್ ನಮಗೆ ಜೆಫ್ ನ ಬಗ್ಗೆ ವಿವಿರವಾಗಿ ಹೇಳಿದರು. ಅವನು ಶಾಲಾ ಮಂಡಳಿಯ ಅಧ್ಯಕ್ಷನಾದ ಕೆಲವೇ ತಿಂಗಳುಗಳಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆ ತಂದನಂತೆ. ಶಾಲಾ ವೇಳಾಪಟ್ಟಿ, ಕಲಿಯುವ- ಕಲಿಸುವ ಪ್ರಕ್ರಿಯೆಯ ಗುಣಮಟ್ಟ ಸುಧಾರಣೆ, ಮಧ್ಯಾಹ್ನದ ಊಟ, ಮಕ್ಕಳಿಗೆ ಕಲೆ – ಸಾಹಿತ್ಯ- ನಾಟಕ ತರಬೇತಿ, ಶಿಕ್ಷಕರಿಗೆ ಪುನರ್ ಮನನ ತರಬೇತಿ, ಫೇಲಾದ ಮಕ್ಕಳಿಗೆ ವೃತ್ತಿ ಶಿಕ್ಷಣ, ಪಠ್ಯದಲ್ಲಿ ಜೀವನ ಮೌಲ್ಯ ಗಳ ಅಳವಡಿಕೆ, ಲಿಂಗ ಸಂವೇದನೆ ತರಬೇತಿ, ಮುಂತಾದ ಯೋಜನೆಗಳನ್ನು ಹಮ್ಮಿಕೊಂಡನಂತೆ. ಪಾಲಕರನ್ನೆಲ್ಲ ಸೇರಿಸಿ, ಜೀರ್ಣವಾಗಿ ಹೋಗಿದ್ದ ಊರಿನ ಗ್ರಂಥಾಲಯ ವನ್ನು ಮತ್ತೆ ಆರಂಭಿಸಿದನಂತೆ, ಶಾಲಾ ಮಕ್ಕಳನ್ನು ಅಲ್ಲಿನ ಗೌರವ ಸದಸ್ಯರನ್ನಾಗಿ ಮಾಡಿದನಂತೆ, ಅದಕ್ಕಾಗಿ ಪ್ರತಿಷ್ಟಿತ ಸಂಸ್ಥೆಯೊಂದರಿಂದ ಪ್ರಶಸ್ತಿ ಪಡೆದನಂತೆ, ಇತ್ಯಾದಿ ಸುದ್ದಿ ತಿಳಿಸಿದರು. `ಅವನು ಮನಸ್ಸು ಮಾಡಿದ್ದರೆ ಮೇಯರ್ ಆಗುವುದು ಕಷ್ಟದ ಮಾತೇ ಇರಲಿಲ್ಲ,’ ಎನ್ನುವುದನ್ನು ಪ್ರೊ. ಬೆಕಮನ್ ಒತ್ತಿ ಹೇಳಿದರು.

ಮೇಯರ್ ಗಿರಿ ಬಿಟ್ಟು ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಪದವಿಯನ್ನು ಆರಿಸಿಕೊಂಡ ನಾಯಕನ ಕತೆ ಹಾಗೂ ಅಂದಿನ ಸಮಾರಂಭ ನನ್ನ ಮೇಲೆ ತುಂಬ ಪರಿಣಾಮ ಬೀರಿತು. ನಮ್ಮ ದೇಶದ ಶಾಲಾ ಆಡಳಿತ ವ್ಯವಸ್ಥೆಯ ಬಗ್ಗೆ ಆಳವಾಗಿ ವಿಚಾರ ಮಾಡುವಂತೆ ಮಾಡಿತು. ನಾನು ತುಂಬ ಸಂದೇಹದಿಂದ ನೋಡುತ್ತಿದ್ದ ಶಾಲಾ ಅಭಿವೃದ್ಧಿ ಮಂಡಳಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಹತ್ತು ವರ್ಷದ ಹಿಂದೆ ಅಮೇರಿಕೆಯ ಸಣ್ಣ ಊರಿನಲ್ಲಿ ನಡೆದ ಘಟನೆ ನಮ್ಮ ರಾಜ್ಯದ ಸರಕಾರಿ ಶಾಲೆಗಳಿಗೆ, ಪಾಲಕ-ಶಿಕ್ಷಕ-ವಿದ್ಯಾರ್ಥಿ ವೃಂದಕ್ಕೆ, ಒಟ್ಟಾರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ  ಟಾರ್ಚಿನ ಬೆಳಕು ಬಿಟ್ಟು ದಾರಿ ತೋರಬಹುದು ಎಂದು ಅನೇಕ ಸಾರಿ ಅನ್ನಿಸಿದೆ.

ಸರಕಾರಿ ಶಾಲೆಗಳ ವಿಲೀನ, ಮುಚ್ಚುವಿಕೆ ಮುಂತಾದ ಸುದ್ದಿಗಳನ್ನು ನೋಡಿದಾಗಲೆಲ್ಲ ನನಗೆ ಅನೇಕ ಪ್ರಶ್ನೆಗಳು ಕಾಡುತ್ತವೆ. ನಾವು ನಮ್ಮ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದೇ ? ಅದು ಹೇಗೆ ಸಾಧ್ಯ- ಪಾಲಕರ ನೆರವಿನಿಂದಲೇ? ಸರಕಾರೇತರ ಸಂಸ್ಥೆಗಳಿಂದಲೇ? ಹೋರಾಟಗಾರರಿಂದಲೇ? ಶಾಲಾಭಿವೃದ್ಧಿ ಮಂಡಳಿ ಯಿಂದಲೇ ಅಥವಾ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನಮ್ಮ ಶಿಕ್ಷಕ- ಆಡಳಿತಗಾರರ ಮೂಲಕವೇ? ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ವಿಚಾರಗಳನ್ನು ಹೀಗೆ ಚರ್ಚಿಸಬಹುದೇನೋ.

ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ನಮ್ಮನ್ನು ಎಚ್ಚರಿಸುವಂತೆ ಕಾಣುತ್ತದೆ.

ಜಪಾನಿನ ಹಕಾಯಿಡೋ ರೇಲ್ವೆ ಕಂಪನಿ ಕಳೆದ ಮೂರು ವರ್ಷದಿಂದ ಕೇವಲ ಒಬ್ಬ ವಿದ್ಯಾರ್ಥಿನಿ ಶಾಲೆಗೆ ಹೋಗಿ ಬರುವುದಕ್ಕಾಗಿ ರೈಲು ಓಡಿಸುತ್ತಿದೆ.

ಅವಳ ಮನೆ ಹಾಗೂ ಶಾಲೆಯ ಹತ್ತಿರ ಹಾಯ್ದು ಹೋಗುವ ಮಾರ್ಗದ ಮೂಲಕ ದಿನಕ್ಕೆ ಎರಡು ಬಾರಿ ಹೋಗುವ ಆ ರೈಲು ನಷ್ಟದಲ್ಲಿಯೇ ನಡೆಯುತ್ತಿದೆ. ಆದರೆ ಇದರ ಸುದ್ದಿಯಾದಾಗ ನಷ್ಟದ ವಿಚಾರ ಪ್ರಮುಖವಾಗಲಿಲ್ಲ. ಆ ರೇಲ್ವೆ ಕಂಪನಿ ತನ್ನ ಗ್ರಾಹಕರ ಸೇವೆಗಾಗಿ ತೋರಿಸಿದ ಬದ್ಧತೆ ಸುದ್ದಿಯಾಯಿತು.

ನಮ್ಮ ಲ್ಲಿಯ ಅಧಿಕಾರಿಗಳು “ರಾಜ್ಯದಲ್ಲಿ ಸಾವಿರಾರು ಶಾಲೆಗಳಲ್ಲಿ ಹತ್ತಕ್ಕಿಂತ ಕಮ್ಮಿ ಮಕ್ಕಳಿದ್ದಾರೆ. ಅವರಿಗಾಗಿ ನಾವು ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಅದಕ್ಕಿಂತ ಅವನ್ನು ಮುಚ್ಚಿಬಿಡುವುದು ಲೇಸು,’’ ಅನ್ನುವ ಲಾಭ-ನಷ್ಟದ ಮಾತಾಡಿದಾಗ ನನಗೆ ಪಿಚ್ಚೆನ್ನಿಸುತ್ತದೆ. ಸಾರ್ವಜನಿಕ ಸೇವೆ, ಜವಾಬುದಾರಿ ಮುಂತಾದ ಮಾತಾಡಿದರೆ, “ಮುಚ್ಚಿದ ಶಾಲೆಗಳ ಮಕ್ಕಳಿಗಾಗಿ ಈಗ ಆರ್ಟೀಯಿ ಇದೆಯಲ್ಲಾ, ಇನ್ನೇನು ಬೇಕು’’ ಅನ್ನುತ್ತಾರೆ.

ಇವರನ್ನು ನೋಡಿದಾಗ ನನಗೆ ಆ ಜಪಾನಿನ ರೈಲು ನೆನೆಪಾಗುತ್ತದೆ.

ಮೂಲ ಸೌಕರ್ಯ:

ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಗಳ ಕೊರತೆ ಇದೆ ಎನ್ನುವ ಮಾತು ಸರಕಾರಿ ಶಾಲೆಗಳು ಹುಟ್ಟಿದ ದಿನವೇ ಹುಟ್ಟಿದ ಮಾತು. ಈ ಕೊರತೆ ನೀಗಿಸಲು ಕಳೆದ ಅನೇಕ ದಶಕಗಳಲ್ಲಿ ಆಳಿದ ವಿವಿಧ ಪಕ್ಷಗಳ, ವಿವಿಧ ನಾಯಕರ ಸರಕಾರಗಳು ಪ್ರಯತ್ನ ಮಾಡಿವೆ. ಇಂದಿಗೂ ಮಾಡುತ್ತಿವೆ. ಈ ಕೆಲಸ ಮುಂದುವರೆಯಲಿ, ಇನ್ನೂ ಹೆಚ್ಚು ಪ್ರಭಾವಶಾಲಿಯಾಗಲಿ. ಮೂಲ ಸೌಕರ್ಯಗಳು ಯಾವುದೇ ವ್ಯವಸ್ಥೆ ಸರಿಯಾಗಿ ನಡೆಯಲು ಸಹಾಯಕವಾದವು. ಇದು ನಿರ್ವಿವಾದ.
IMG_4306ಆದರೆ ಇಂದಿನ ದಿನ ಗಳಲ್ಲಿ ಸರ್ವೇ ಸಾಮಾನ್ಯ ಎನ್ನಬಹುದಾದ ಸೌಕರ್ಯಗಳು ಕೆಲವೇ ದಶಕಗಳ ಹಿಂದೆ ಕನಸಿಗೂ ನಿಲುಕದವಾಗಿದ್ದವು ಎನ್ನುವುದನ್ನು ನಾವು ಮರೆಯುವುದು ಬೇಡ. ರಾಜ್ಯದ ನೂರಾರು ಶಾಲೆಗಳು ನೂರು ವರ್ಷಕ್ಕೂ ಹಳೆಯವು. ಅವು ಆರಂಭವಾದಾಗ ಶಾಲೆ ಎಂದರೆ `ಶಿಕ್ಷಕ- ವಿದ್ಯಾರ್ಥಿಗಳು’ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆದರೆ ಅವುಗಳಲ್ಲಿ ಕೆಲವಾದರೂ ಜಗತ್ತೇ ನಿಬ್ಬೆರಗಾಗುವಂತಹ ಯಶಸ್ವೀ ನಾಗರಿಕರನ್ನು, ನಾಯಕರನ್ನೂ, ಬುದ್ಧಿವಂತರನ್ನು ಸೃಷ್ಟಿಸಿದವು ಎನ್ನುವುದನ್ನೂ ಸಹ ನಾವು ಮರೆಯಬಾರದು.

ಇದಕ್ಕೆ ಸಂಬಂಧ ಪಟ್ಟಂತೆ ಇರುವ ಇನ್ನೊಂದು ವಿಷಯ ವೆಂದರೆ ಯಾವುದೇ ಮೂಲ ಸೌಕರ್ಯ ವಿಲ್ಲದ ಖಾಸಗಿ ಶಾಲೆಗಳಿಗೆ ಸರಕಾರ ಪರವಾನಿಗೆ ನೀಡುವುದು. ಅವರು ಈ ಸೌಕರ್ಯಗಳನ್ನು ಒದಗಿಸಿದ್ದಾರೋ ಇಲ್ಲವೋ ಎನ್ನುವುದನ್ನು ಕಾಲಕಾಲಕ್ಕೆ ನೋಡದೇ ಇರುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಕನಿಷ್ಟ ಒಂದು ಕಿಲೋಮಿಟರ್ ಇರಬೇಕು ಎನ್ನುವ ನಿಯಮವನ್ನು ಪದೇ ಪದೇ ಮುರಿಯುವುದು, ರಾಜಕಾರಣ ಇಂತಹ ನಿರ್ಧಾರಗಳನ್ನು ಪ್ರಭಾವಿಸುವುದು, ಇವೆಲ್ಲವೂ ಸಹ ಇಂದಿನ ದುಸ್ಥಿತಿಗೆ ಕಾರಣಗಳು.

ಪಾಲಕರ ಭಾಗೀದಾರಿ:

ಯಾರು ತಮ್ಮ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ, ಸಜ್ಜನರನ್ನಾಗಿ, ಯಶಸ್ವೀ ನಾಗರಿಕರನ್ನಾಗಿ ರೂಪಿಸುವ ಉದ್ದೇಶದಿಂದ ಶಾಲೆಗೆ ಕಳಿಸುತ್ತಾರೋ, ಅವರ ಜವಾಬ್ದಾರಿ ಮಕ್ಕಳನ್ನು ಶಾಲೆಗೆ ನೂಕಿ ಸುಮ್ಮನಾಗಿ ಬಿಟ್ಟರೆ ಮುಗಿಯುವುದಿಲ್ಲ. ಪಾಲಕರ ಸಹಭಾಗಿತ್ವವಿಲ್ಲದೇ ಶಾಲಾ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಮಕ್ಕಳು ಕಲಿಯುವ, ಶಿಕ್ಷಕರು ಕಲಿಸುವ ಪ್ರಕ್ರಿಯೆಯಲ್ಲಿ ಪಾಲಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮಸ್ಯೆಗಳಿದ್ದರೆ ಮಾತುಕತೆ ಯಿಂದ ಬಗೆ ಹರಿಸಿಕೊಳ್ಳಬೇಕು. ಹಾಗೆಂದು ಪಾಲಕರು ತಮ್ಮ ಪಾಲಿನ ಎಲ್ಲೆಗಳನ್ನು ಅರಿಯಬೇಕು. ಶೈಕ್ಷಣಿಕ ವಿಷಯಗಳನ್ನು ಬಿಟ್ಟು ದಿನ ನಿತ್ಯದ ಆಡಳಿತ ದ ಲ್ಲಿ ಕೈಹಾಕುವ ಪಾಲುದಾರಿಕೆಯಿಂದ ತೊಂದರೆಯೇ ಹೆಚ್ಚು.
ಇಂದಿನ ದಿನಗಳಲ್ಲಿ ಪ್ರಮುಖ ಎನ್ನಿಸಿಕೊಂಡಿರುವ ಇಂಗ್ಲಿಷ್ ಕಲಿಕೆಯ ಸಮಸ್ಯೆಯನ್ನು ಸಹ ಪಾಲಕರು ಪರಿಹರಿಸಬಹುದು. ಒಂದು ಶಾಲೆಯ ಪಾಲಕರೆಲ್ಲ ಸೇರಿ ಒಬ್ಬ ಇಂಗ್ಲಿಷ್ ಬೋಧಕರನ್ನು ಅರೆ ಕಾಲಿಕವಾಗಿ ನೇಮಿಸಿಕೊಂಡರೆ, ಎಲ್ಲ ವರ್ಗಗಳಿಗೂ ಆದೀತು. ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ ಎನ್ನುವ ಕೊರತೆ ಇಂಗೀತು. ಬೆಂಗಳೂರಿನ ಕೆಲವು ಶಾಲೆಗಳಲ್ಲಿ, ಅಬ್ಯಾಕಸ್, ರಂಗ ತರಬೇತಿ, ಸಂವಹನ ಕಲೆಗಳಿಗೆ ಹಾಗೂ ಇತರ ವಿಷಯಗಳಿಗೆ ಪಾಲಕರೇ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಹುಡುಕಿ ನೇಮಿಸುತ್ತಿದ್ದಾರೆ, ಅಲ್ಲವೇ? ತಮಿಳುನಾಡಿನಲ್ಲಿ ಕೆಲವು ಕಡೆ, ವಿಶೇಷವಾಗಿ ಸೇನಾ ನೆಲೆಗಳಲ್ಲಿ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ತಮಿಳು ಶಿಕ್ಷಕರು ಇಲ್ಲದೇ ಹೋದರೆ, ಪಾಲಕರು ನೇಮಿಸುತ್ತಾರೆ. ಇದು ಅಲ್ಲಿ ಅನೇಕ ದಶಕಗಳಿಂದ ನಡೆದುಕೊಂಡು ಬಂದ ವ್ಯವಸ್ಥೆ.

ಮೇಲ್ವಿಚಾರಣೆ :

ಇದು ಸ್ವಲ್ಪ ಸೂಕ್ಷ್ಮ ವಿಚಾರ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕುವಂಥದ್ದೂ ಇರಬಹುದು. ಆದರೆ ಅಲ್ಲಗಳೆಯುವಂಥದಲ್ಲ. ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ಅತ್ಯಂತ ದೊಡ್ಡ ವ್ಯತ್ಯಾಸ ಎಂದರೆ ಅಲ್ಲಿ ಕೆಲಸ ಮಾಡುವವರ ಮೇಲಿನ ಮೇಲ್ವಿಚಾರಣೆಯ ಮಟ್ಟ. ಸರಕಾರಿ ಶಾಲಾ ಶಿಕ್ಷಕರು ಹೆಚ್ಚಿನ ವಿದ್ಯಾರ್ಹತೆ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರು, ಖಾಸಗಿಯವರಿಗೆ ಹೋಲಿಸಿದರೆ ಹೆಚ್ಚಿನ ಸಂಬಳ ಪಡೆಯುವವರೂ ಹೌದು. ಆದರೆ ಅವರ ಕಾರ್ಯಕ್ಷಮತೆ ಖಾಸಗಿ ಶಿಕ್ಷಕರಿಗಿಂತ ಕಡಿಮೆ ಎನ್ನುವ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದನ್ನು ಸಾಮಾನ್ಯ ಜನರೂ ಹೇಳುತ್ತಾರೆ, ಅಧಿಕಾರಿಗಳು, ಮಂತ್ರಿಗಳೂ ಹೇಳುತ್ತಿರುತ್ತಾರೆ. ಸರಕಾರಿ ಶಿಕ್ಷಕರ ಪ್ರತಿಭೆಯ ಕುರಿತು ಯಾರಿಗೂ ಸಂದೇಹಗಳಿದ್ದಂತೆ ಇಲ್ಲ. ಆದರೆ ಅವರು ತಮ್ಮ ಆಂತರಿಕ ಶಕ್ತಿಗಿಂತ ಕಡಿಮೆ ಕೆಲಸ ಮಾಡುತ್ತಿದ್ದಾರೆ ಎಂದಾದರೆ ಅದಕ್ಕೆ ಅವರ ಅನಾಸಕ್ತಿ ಕಾರಣ, ಪ್ರತಿಭೆಯ ಕೊರತೆ ಅಲ್ಲ.  ಇದಕ್ಕೆ ಸರಕಾರಿ ವ್ಯವಸ್ಥೆಯಲ್ಲಿ ಅಪರೂಪ ವಾಗಿರುವ ಒಳ್ಳೆಯ ಕೆಲಸಗಾರರನ್ನು ಹುಡುಕಿ ಬೆನ್ನು ತಟ್ಟುವ ವ್ಯವಸ್ಥೆ ಮುಖ್ಯ ಕಾರಣ ಇರಬಹುದು.

ಇದಕ್ಕೆ ಇನ್ನೊಂದು ಕಾರಣ ಎಂದರೆ ಖಾಸಗಿ ಶಾಲೆಗಳಲ್ಲಿ ಇರುವ ದೈನಂದಿನ ಮೇಲ್ವಿಚಾರಣೆ ಹಾಗೂ ಶಿಕ್ಷಕ, ಸಿಬ್ಬಂದಿಗಳ ವಾರ್ಷಿಕ ಕಾರ್ಯಕ್ಷಮತೆಯ ಅವಲೋಕನ. ಕೆಲಸದ ಸ್ಥಳಗಳಲ್ಲಿ ಮೇಲಿನವರು ಗಟ್ಟಿಯಾಗಿದ್ದಾಗ ಜೋರಾಗಿ ಕೆಲಸ ಮಾಡುವುದು, ಅವರು ತಲೆ ಕೆಡಿಸಿಕೊಳ್ಳದಿದ್ದಾಗ ಕೆಳಗಿನವರು ತಮ್ಮ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಮನುಷ್ಯ ಸಹಜ ಸ್ವಭಾವ.

ವಿಶ್ವಬ್ಯಾಂಕಿನ ಸೂಚನೆಯಂತೆ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಶಾಲೆಗಳಲ್ಲಿನ ತ್ರೈಮಾಸಿಕ ಪರಿವೀಕ್ಷಣಾ ವ್ಯವಸ್ಥೆಯನ್ನು 2001 ರಲ್ಲಿ ಕೈಬಿಟ್ಟವು. ಶಿಕ್ಷಕರನ್ನು ವಿಷಯವಾರು ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ನಿಂತು ಹೋಯಿತು. ಕಲಿಕಯ ಗುಣಮಟ್ಟ ಕುಸಿಯಲು ಇದೂ ಒಂದು ಕಾರಣ.

ತಮ್ಮ ಸೇವೆಯುದ್ದಕ್ಕೂ ನುಡಿದಂತೆ ನಡೆದ ಭಾರತೀಯ ಪೋಲಿಸ್ ಸೇವೆ ಅಧಿಕಾರಿ ಅಜಯ ಕುಮಾರ್ ಸಿಂಗ್  ನನಗೆ ಹೇಳಿದ ಒಂದು ಮರೆಯಲಾರದ ಮಾತಿನೊಂದಿಗೆ ಮುಗಿಸುತ್ತೇನೆ.

ಅವರೊಂದಿಗೆ ಹೀಗೊಮ್ಮೆ ಮಾತಿಗೆ ಕೂತಾಗ ನಾನು, ``ಏನು ಮಾಡುವುದು ಬಿಡಿ ಸಾರ್, ಈ ವ್ಯವಸ್ಥೆ ಯಲ್ಲಿ ಎಲ್ಲರೂ ಕಳ್ಳರು. ಯಾರನ್ನು ತಿದ್ದಲು ಸಾಧ್ಯ ವಿದೆ? ಇಡೀ ವ್ಯವಸ್ಥೆಯೇ ಹಾಳಾಗಿ ಹೋದಾಗ ಸಮಾಜದ ಯಾವುದೋ ಒಂದು ಭಾಗ ಮಾತ್ರ ಪ್ರಾಮಾಣಿಕರಾಗಿ ಇರಬೇಕು ಎನ್ನುವ ಮಾತೇ ತಪ್ಪು’’ ಎನ್ನುವ ವೇದಾಂತದ ಮಾತಾಡಿದೆ.

ajayಅದಕ್ಕೆ ಅವರು “ಅಯ್ಯೋ ಹಾಗನ್ನಬೇಡಿ. ಹಾಗೆ ತುಂಬ ಜನರಲ್ ಆಗಿ ಮಾತಾಡಿದರೆ ಹೇಗೆ,’’ ಎನ್ನುತ್ತಾ ಕಣ್ಣಗಲಿಸಿ ನಕ್ಕರು.

“ಸ್ವಾತಂತ್ರ ಬಂದ ಹೊಸತರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಬಳ ಏನಿದ್ದಿರಬಹುದು? ಕೆಲವು ಆಣೆಗಳು ಮಾತ್ರ. ಅವರಿಗೆ ಬೇರೆ ಯಾವ ಸೌಲಭ್ಯಗಳು ಇದ್ದವು? ಏನೂ ಇಲ್ಲ. ಆದರೆ ಅವರ ವೃತ್ತಿಗೆ ಅವರ ಬದ್ಧತೆ ಎಷ್ಟಿತ್ತು? ಅವರು ಇಡೀ ಸಮಾಜದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿದ್ದರು. ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆ ತಂದರು, ಬಡ ಹುಡುಗರಿಗೆ ಪುಸ್ತಕ- ಬಟ್ಟೆ ಕೊಡಿಸಿದರು. ದೂರದ ಊರಿನಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕಟ್ಟಿಕೊಂಡು ಹೋಗಿ ಪರೀಕ್ಷೆ ಬರೆಸಿದರು. ಇಂದಿಗೂ ನಮ್ಮಂಥ ಅನೇಕರ ಬದುಕಿನಲ್ಲಿ ಅತ್ಯಂತ ಗೌರವಕ್ಕೆ ಅರ್ಹರಾಗಿರುವ ಸ್ಥಾನದಲ್ಲಿ ಇರುವವರು ಶಿಕ್ಷಕರು. ನಿಜವಾದ ಅರ್ಥದಲ್ಲಿ ಅವರು ಆಧುನಿಕ ಭಾರತದ ನಿರ್ಮಾಪಕರು. ಆ ಹೊತ್ತಿನಲ್ಲಿ ನಮ್ಮೆಲ್ಲ  ಶಿಕ್ಷಕರು ಅಪ್ರಾಮಾಣಿಕರಾಗಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿದ್ದೀರಾ? ಅವರು ತಮ್ಮ ಕರ್ತವ್ಯಕ್ಕೆ ಬೆನ್ನು ತೋರಿಸಿದ್ದರೆ, ದುಡ್ಡಿನ ಆಸೆಗೆ ಬಿದ್ದು ತಮ್ಮಿಂದ ನಿರೀಕ್ಷಿಸಲಾದ ಸೇವೆ ನೀಡದೆ ಇದ್ದಿದ್ದರೆ, ಅಥವಾ ಸೋಮಾರಿಗಳಾಗಿ ಅಲೆದಾಡಿದ್ದರೆ, ಅಥವಾ ರಾಜಕಾರಣಿಗಳ ಹಿಂದೆ ಓಡಾಡಿಕೊಂಡಿದ್ದರೆ, ಅಥವಾ ಬೇರೆ ಯಾವುದೋ ರೀತಿಯಲ್ಲಿ ನಿರ್ಲಕ್ಷ ವಹಿಸಿದ್ದರೆ, ಏನಾಗುತ್ತಿತ್ತು? ಈ ದೇಶದಲ್ಲಿ ಇಂಜಿನಿಯರುಗಳು, ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ನ್ಯಾಯಾಧೀಶರು, ಕಲಾಕಾರರು, ಐಏಎಸ್ ಅಧಿಕಾರಿಗಳು, ಪೋಲಿಸರು, ಇವರು ಯಾರೂ ಇರುತ್ತಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತ ಐಟಿ ತಂತ್ರಜ್ಞರ, ವಿಜ್ಞಾನಿಗಳ ದೇಶವಾಗಿ ಹೊರಹೊಮ್ಮುತ್ತಿರಲಿಲ್ಲ. ಯಾವ ಕ್ಷೇತ್ರದಲ್ಲಿಯೂ ನಾವು ಮುಂದುವರೆಯಲು ಆಗುತ್ತಿರಲಿಲ್ಲ ಎಂದು ಡಾ. ಸಿಂಗ್ ವಿವರಿಸಿದರು.
ನನ್ನ ಬದುಕಿನ ಕತ್ತಲೆಯ ದಿನಗಳಲ್ಲಿ ಸದಾ ಬೆಳಕು ನೀಡುವ ಮಾತು ಇದು.


ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ `ಆದಿಲ್ ಶಾಹಿ ಆಡಳಿತ ಹಾಗೂ ಬಹು ಸಂಸ್ಕೃತಿ’ ವಿಚಾರ ಸಂಕಿರಣ



ಹೀಗೊಂದು ಅರ್ಧ ಭಾಷಣ

ಎಲ್ಲರಿಗೂ ನಮಸ್ಕಾರ

ಕೇಂದ್ರೀಯ ವಿಶ್ವವಿದ್ಯಾಲಯ ದವರು `ಆದಿಲ್ ಶಾಹಿ ಆಡಳಿತ ಹಾಗೂ ಬಹು ಸಂಸ್ಕೃತಿ’ಯ ಬಗ್ಗೆ ವಿಚಾರ ಸಂಕಿರಣ ಆಯೋಜಿಸಿದ್ದಾರೆ. ಯಾವುದು ಈಗ ತುಂಬ ಅಪರೂಪ ವಾಗುತ್ತಿದೆಯೋ ಅದರ ಬಗ್ಗೆ ಚರ್ಚೆ ಮಾಡುವ ಸಾಹಸ ಮಾಡಿದ್ದಕ್ಕಾಗಿ ಹಾಗೂ ಅದರಲ್ಲಿ ಇನ್ನೂ ನಂಬಿಕೆ ಇಟ್ಟ ಕೆಲವು ಜನರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ನಾನು ಇತಿಹಾಸದ ಒಬ್ಬ ವಿದ್ಯಾರ್ಥಿಯಾಗಿ ಅರ್ಧ ಜೀವನ ಕಳೆದಿದ್ದೇನೆ. ಅಂಕಲಿಪಿ ನೋಡಿಕೊಂಡು ಅಕ್ಷರ ಕಲಿಯುವ ನಾವು ನಿನ್ನೆ ``ರಠಈಕ’’ ಎಂದು ತೀಡಿದ್ದನ್ನು ನೋಡಿಕೊಂಡು ಬರೆದರೆ ನಮ್ಮ ಇಂದಿನ ಹಸ್ತಾಕ್ಷರ ಸುಧಾರಿಸೀತು ಎನ್ನುವ ನಂಬಿಕೆ ನನ್ನದು. ಇದನ್ನು ನೋಡಿದ ಡಾ. ಶಿವಗಂಗಾ ರುಮ್ಮಾ ಅವರು ಹಾಗೂ ಇತರ ಆಯೋಜಕರು ನನ್ನಂಥವರನ್ನು ಇಲ್ಲಿಗೆ ಕರೆದಿರಬಹುದು. ಅವರಿಗೆ ಮನತುಂಬಿದ ಧನ್ಯವಾದ.

ಆದರೆ ನಾನು ಇಲ್ಲಿಗೆ ಬಂದಿರುವುದು ನಮ್ಮ ಇತಿಹಾಸ ದ ಅರಿವಿನ ಆಳವನ್ನು ಹೆಚ್ಚಿಸಿದ, ನಮ್ಮ ದೇಶದ ಸಾಕ್ಷಿ ಪ್ರಜ್ಞೆಯಾಗಿ ನಮ್ಮ ನಡುವೆ ಇರುವ ಪ್ರೊ. ಷೇಖ್ ಅಲಿ ಸರ್ ಅವರು, ಯುವಕರನ್ನೂ ನಾಚಿಸುವಷ್ಟು ಚೈತನ್ಯ ಹೊಂದಿರುವ 85 ವರ್ಷದ ಇತಿಹಾಸಕಾರ ಡಾ. ಎಮ್. ಎ. ನಯೀಮ್ ಅವರು, ಹಿಂದೂ -ಬೌದ್ಧ– ಜೈನ್ ಸಂಸ್ಕೃತಿಗಳ ಬಗ್ಗೆ ತಮ್ಮ ಅಪಾರ ಆಸಕ್ತಿ ಹಾಗೂ ಅಧ್ಯಯನದಿಂದ ತಮ್ಮ ಪ್ರವೃತ್ತಿಯನ್ನೇ ವೃತ್ತಿಯಾಗಿ ಮಾಡಿಕೊಂಡ ಅಬ್ದುಲ್ ಅಜೀಜ್ ರವರು, ಉಪ್ಪು ನೀರಿನ ನಡುವಿನ ನಡುಗಡ್ಡೆಗಳಾಗಿ ಹೋಗಿರುವ ಕನ್ನಡ – ಉರ್ದುಗಳ ನಡುವಿನ ಅಪರೂಪದ ಸೇತುವೆಯಂತಿರುವ ಸಯ್ಯದ್ ತನ್ವೀರ್ ಅವರು, ಹಾಗು ಅವರಂತಹ ಇತರರನ್ನು ನೋಡಿ ಮಾತಾಡಿಸುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ.

ನಾನು ಹೈದರಾಬಾದು ಕರ್ನಾಟಕದಲ್ಲಿ ಇಷ್ಟು ದಿನ ಕೆಲಸ ಮಾಡಿದವನು. ಈ ಕಾಲದಲ್ಲಿ ಹೊಟ್ಟೆ ಪಾಡಿಗಾಗಿ ಇಲ್ಲಿನ ಇತಿಹಾಸ ಓದಿಕೊಂಡು ``ಅವರು ಆವಾಗಲೇ ಹಾಗಿದ್ದರು, ನಾವು ಈಗ ಹೇಗೇಗೋ ಇದ್ದೇವೆಲ್ಲ’’ ಎಂದು ಅಚ್ಚರಿ ಗೊಂಡು, ಅದರ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲ ಸ್ವಲ್ಪ ಸ್ವಲ್ಪ ಬರೆದವನು. ನನಗೆ ಆದಿಲ್ ಶಾಹಿಗಳ ಬಗ್ಗೆ ಕೊಂಚ ಗೊತ್ತು ಎನ್ನುವಷ್ಟೇ ಗೊತ್ತು. ಇತರರಿಗೆ ಹೇಳುವಷ್ಟು ಗೊತ್ತಿಲ್ಲ. ಹೀಗಾಗಿ ನಾನು ಇಂದು ಮಾಡಬಂದಿರುವುದು ಕೇವಲ ಅರ್ಧ ಭಾಷಣ- ಬಹು ಸಂಸ್ಕೃತಿಯ ಬಗೆಗೆ.

ಇಂದಿನ ಬಹು ಚರ್ಚಿತ ವಿಷಯಗಳ ಪೈಕಿ ಬಹು ಸಂಸ್ಕೃತಿ ಎನ್ನುವ ಪದವು ಕೂಡ ಒಂದು. ಇದು ತನ್ನ ಮೂಲ ಅರ್ಥವನ್ನು ಕಳೆದುಕೊಂಡು ಬಳಸುವವರ ಬಾಯಲ್ಲಿ ಏನೇನೋ ಆಗಿ ಹೋಗುತ್ತಿರ ಬಹುದು ಎಂದು ನನಗೆ ಆತಂಕವಿದೆ. ಅದಕ್ಕೆ ತಿಳಿಯದವರು ಎಷ್ಟು ಕಾರಣರೋ, ಅಷ್ಟೇ ತಿಳಿದವರೂ ಕೂಡ ಕಾರಣವಿರಬಹುದು ಅಂತ ನನಗೆ ಒಂದೊಂದು ಸಾರಿ ಅನ್ನಿಸುತ್ತದೆ.

ಬಹುಶ್ರತ ವಿಧ್ವಾಂಸರು ತಾವು ಸಹಜವಾಗಿ ಭಾರಿ ಭಾರಿ ಪದಗಳನ್ನು ಬಳಸುವಂತೆ ಬಹುಸಂಸ್ಕೃತಿ ಎನ್ನುವ ಪದ ಬಳಸಿದಾಗಲೆಲ್ಲ, ಸಾಮಾನ್ಯ ಜನರು ಇದೇನೋ ದೊಡ್ಡ ವಿಷಯ ಇರಬಹುದು, ನಮ್ಮಂಥವರ ದಿನ ನಿತ್ಯದ ಜಗತ್ತಿಗೆ ಸಂಬಂಧ ಪಟ್ಟದ್ದು ಇರಲಿಕ್ಕಿಲ್ಲವೆಂದು ಗಾಬರಿಯಿಂದ ದೂರ ಸರಿಯುತ್ತಾ ರೋ ಏನೋ. ನಮ್ಮ ಸಮಾಜ ಬಹು ಸಂಸ್ಕೃತಿಯಿಂದ ಕೂಡಿರಬೇಕು ಎಂದು ದೊಡ್ಡವರೆಲ್ಲಾ ದೇಶದ ಯುವ ಜನತೆಗೆ ಕರೆ ಕೊಟ್ಟಾಗ ಇದೇನೋ ಅಸಾಧ್ಯವಾದದ್ದನ್ನು ಇವರು ಹೇಳುತ್ತಿರಬೇಕು ಎಂದು ಈ ಹುಡುಗರಿಗೆ ಅನ್ನಿಸಿ, ಮುಂದೆ ಕೇಳಿಸಿಕೊಳ್ಳುವುದನ್ನೇ ನಿಲ್ಲಿಸಿರಬೇಕು ಅಂತ ನನಗೆ ಅನೇಕ ಬಾರಿ ಅನ್ನಸಿದೆ.  ಹಿಂದೊಮ್ಮೆ ದೊಡ್ಡ ವಿಧ್ವಾಂಸರೊಬ್ಬರು ``ಸಮಕಾಲೀನ ಜಾಗತಿಕ ಸಂದರ್ಭದಲ್ಲಿ’’ ಎಂದು ತಮ್ಮ ಮಾತನ್ನು ಆರಂಭಿಸಿದಾಗ ಸಮಕಾಲೀನ ಜಾಗತಿಕ ಸಂದರ್ಭವೇ ಅಲ್ಲಿಂದ ಕಾಲು ಕಿತ್ತಿತಂತೆ. ಹಾಗೆ.

`ಬಹಳ ತಿಳಿದುಕೊಂಡವನು ಬುದ್ಧಿವಂತನಲ್ಲ. ತನಗೆ ಗೊತ್ತಿರುವುದನ್ನು ಇತರರಿಗೆ ತಿಳಿಸಿ ಹೇಳುವವನು ನಿಜವಾದ ಬುದ್ಧಿವಂತ’ ಎಂಬ ಸುಭಾಷಿತ ವೊಂದಿದೆ. ನಮ್ಮಲ್ಲಿ ಅನೇಕ ಪಂಡಿತರು ಈ ಜವಾಬುದಾರಿಯನ್ನು ಅರಿಯುತ್ತಿಲ್ಲ, ಅದಕ್ಕೆ ತಕ್ಕಂತೆ ನಡೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತದೆ.

ಬಹು ಸಂಸ್ಕೃತಿ ಎಂದರೆ ಬೇರೆ ಏನೂ ಅಲ್ಲ. ``ನಾವು-ನೀವು ಇಷ್ಟು ದಿನ ಸರಳವಾಗಿ, ಸಹಜವಾಗಿ, ಒಬ್ಬರನ್ನೊಬ್ಬರು ಸಹಿಸಿಕೊಂಡು, ಒಪ್ಪಿಕೊಂಡು,  ಒಬ್ಬರಿಗೊಬ್ಬರು ಕೇಡು ಬಗೆಯದೆ ಜೀವಿಸಿದ್ದೇವಲ್ಲ, ಅದೇ’’ ಅಂತ ಯಾರಾದರೂ ಹೇಳಿದರೆ ಆ ಪದದ ಪರದೇಸಿತನ ಕಡಿಮೆಯಾಗುತ್ತದೆ.

ಆದರೆ ‘ಜಗತ್ತಿನಲ್ಲಿ ಅತ್ಯಂತ ಸಂಕೀರ್ಣ ವಾದ ಕೆಲಸಗಳ ಪೈಕಿ ಒಂದೆಂದರೆ ಸರಳವಾಗಿ ಜೀವಿಸುವುದು’ ಎನ್ನುವ ಮಾತಿದೆ. ಅದಕ್ಕೆ – ‘ಇತರರಿಗೆ ಅರ್ಥ ವಾಗುವಂತೆ ಮಾತಾಡುವುದು’ - ಎನ್ನುವ ಇನ್ನೊಂದು ಸಾಲನ್ನೂ ಸೇರಿಸಬಹುದು.

ನಾವು ಮಾತಾಡುವಾಗ, ಬರೆಯುವಾಗ ಅಷ್ಟೊಂದು ಕ್ಲಿಷ್ಟವಾಗಿ, ಕೆಲವೇ ಕೆಲವು ಜನರಿಗೆ ತಿಳಿಯುವಂತೆಯೋ, ಅಥವಾ ಓದಿದವರಿಗೆ, ಕೇಳಿದವರಿಗೆ ಬೇರೆ ಬೇರೆ ಅರ್ಥ ಬರುವಂತೆಯೋ ಏಕೆ ಮಾತಾಡುತ್ತೇವೆ? ಏಕೆ ಬರೆಯುತ್ತೇವೆ ಎಂಬುದು ನನಗೆ ಅರ್ಥವಾಗಲಾರದ ವಿಚಾರ. ಇದರ ಬಗ್ಗೆಯೇ ಕೇಂದ್ರೀಯ ವಿಶ್ವವಿದ್ಯಾಲಯ ಬೇರೆಯೇ ಒಂದು ವಿಚಾರ ಸಂಕಿರಣ ಇಟ್ಟುಕೊಳ್ಳಬಹುದೇನೋ.

ಸರಳ ಭಾಷೆಯ ಬಗ್ಗೆ ಇಂಗ್ಲಂಡಿನಲ್ಲಿ ಒಂದು ನೂರು ವರ್ಷದ ಹಿಂದೆ ಒಂದು ಜನಾಂದೋಲನವೇ ಆಗಿ ಹೋಯಿತು. ಅದು ಎಷ್ಟು ತೀವೃವಾಗಿ ಪರಿಣಾಮಕಾರಿಯಾಗಿ ಬೆಳೆಯಿತು ಎಂದರೆ, ಈಗ ಲಂಡನ್ನಿನಲ್ಲಿ ಸರಕಾರದ ದಾಖಲೆಗಳೆಲ್ಲವೂ ಜನರಿಗೆ ಅರ್ಥವಾಗುವಂತೆ ಇರಬೇಕು ಎನ್ನುವ ಕಾನೂನೇ ಇದೆ. `ಸರಳ ಭಾಷಾ ಆಯೋಗ’ ಅಂತ ಒಂದು ಸಾರ್ವಜನಿಕ ಸಂಸ್ಥೆಯೇ ಇದೆ. ಸರಕಾರದ ಪ್ರತಿ ದಾಖಲೆ, ಪತ್ರ, ಕಾಯಿದೆ, ಕಾನೂನು, ನಡವಳಿಕೆ, ಎಲ್ಲವೂ ಸರಳ ಭಾಷೆಯಲ್ಲಿ ಇವೆಯೋ ಇಲ್ಲವೋ ಎಂದು ಈ ಆಯೋಗ ಆಭ್ಯಾಸ ಮಾಡಿ ಒಂದು ಪ್ರಮಾಣ ಪತ್ರ ನೀಡುತ್ತದೆ. ಅವುಗಳನ್ನು ಸರಳಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡುತ್ತದೆ. ನಮ್ಮ ದೇಶಕ್ಕೆ, ನಮ್ಮ ಕರುನಾಡಿಗೆ ಇಂತಹದೊಂದು ಆಂದೋಳನದ, ಕಾನೂನಿನ, ಆಯೋಗದ ಅವಶ್ಯಕತೆ ಇದೆ ಎನ್ನುವ ವಿಚಾರ ನಮಗೆಲ್ಲರಿಗೂ ಬರಲಿ. ‘ಆನೋ ಭದ್ರಾ ಕೃತವೋ ಯಾಂತು ವಿಶ್ವತಃ’ ಎನ್ನುವುದರ ಆಶಯದಂತೆ.

ಹಾಗಾದರೆ ಬಹು ಸಂಸ್ಕೃತಿ ಎನ್ನುವುದು ಏನು? – `ಅವರವರ ಭಾವಕ್ಕೆ, ಅವರವರ ಭಕುತಿಗೆ’ ಎನ್ನುವ ದಾಸವಾಣಿಯನ್ನು, `ಲೋಕೋ ಭಿನ್ನ ರುಚಿಃ’, ಎನ್ನುವ ಮಾತನ್ನು ನೆನೆದಾಗ ನಮಗೆ ಅದರ ಅರ್ಥ ಸ್ವಲ್ಪವಾದರೂ ತಿಳಿದೀತು.

ಈಗ ಇಂತಹವೇ ಕೆಲವು ಸಂಸ್ಕೃತ ಸುಭಾಷಿತ ಗಳನ್ನು ನೋಡೊಣ.

``ಸರ್ವೇ ಭವಂತು ಸುಖಿನಹ , ಸರ್ವೇ ಸಂತು ನಿರಾಮಯಹ, ಸರ್ವೇ ಭದ್ರಾನಿ ಪಶ್ಯಂತು, ಮಾಕಶ್ಚಿತ್ ತಸ್ಯ ಭಾದ್ ಬವೇತ್’’ – ಇದು ಸರ್ವೇ ಡಿಪಾರ್ಟಮೆಂಟಿನವರಿಗೆ ಮಾತ್ರ ಒಳ್ಳೆಯದಾಗಲಿ ಎಂಬ ಅರ್ಥ ಬರುವ ಮಾತಲ್ಲ. ಬ್ರಹದಾರಣ್ಯಕ  ಉಪನಿಷತ್ತಿನ ಉದಾತ್ತ ಅರ್ಥ ಹೊಂದಿದ ‍ಶ್ಲೋಕ ವಿದು. `ಎಲ್ಲರೂ ಸುಖವಾಗಿರಲಿ, ನಿರೋಗಿಯಾಗಿರಲಿ, ಎಲ್ಲರಿಗೂ ಪವಿತ್ರವಾದದ್ದು ಕಾಣಲಿ, ಯಾರಿಗೂ ತೊಂದರೆ ಉಂಟಾಗದಿರಲಿ’ ಎನ್ನುವುದು ಇದರ ಅರ್ಥ. ನನ್ನ ಪ್ರಕಾರ ನೋಡಲು ಅತಿ ಸರಳವಾಗಿ ಕಾಣುವ, ಆದರೆ ಮನುಕುಲಕ್ಕೆ ಸಾವಿರಾರು ವರ್ಷಗಳ ಕಾಲ ಹಾದಿ ತೋರಿಸುವಷ್ಟು ಶಕ್ತಿ ಇರುವ ಮಾತಿದು.

``ದೃಷ್ಟಿ ಜ್ಞಾನಮಯಿ ಕೃತ್ವಾ, ಪಶ್ಚೇದ್ ಬ್ರಹ್ಮ ಮಯಂ ಜಗತ್’’. – ತೇಜೋಬಿಂದು ಉಪನಿಷತ್ ನಿಂದ ಹೆಕ್ಕಿದ ಈ ಸಾಲಿನ ಅರ್ಥ ಎಂದರೆ– `ನಮ್ಮ ತಿಳಿವಿನ ಕಣ್ಣು ತೆರೆದಾಗಲೆಲ್ಲ ನಮಗೆ ಕಾಣವುದು ಏನೆಂದರೆ ಈ ಜಗತ್ತು ಎಲ್ಲವೂ ಬ್ರಹ್ಮ ಮಯವಾದದ್ದು’.

``ಸರ್ವಂ ಖಲ್ವಿದಂ ಬ್ರಹ್ಮ’’ – `ಏನಿದೆಯೋ ಅದೆಲ್ಲವೂ ಬ್ರಹ್ಮ’. ನಾವು ಏನನ್ನು ನೋಡುತ್ತೇವೆಯೋ , ಕೇಳುತ್ತೇವೆಯೋ, ಅನುಭವಿಸುತ್ತೇವೆಯೋ, ಅದೆಲ್ಲವೂ ಬ್ರಹ್ಮ ಎನ್ನುವುದು ಛಾಂದೋಗ್ಯ ಉಪನಿಷತ್  ನ ಒಂದು ಸಾಲು.

``ವಿಶ್ವಂ ನಾರಾಯಣಂ ಹರಿಃ’’ – `ವಿಶ್ವವೆಲ್ಲ ಹರಿ ನಾರಾಯಣ’ ಇದ್ದಂತೆ ಎನ್ನುವುದು ನಾರಾಯಣ ಸೂಕ್ತದ ಮಾತು.

ಕಠೋಪನಿಷತ್ ನಲ್ಲಿ ``ನೇಹ ನಾನಾಸ್ತಿ ಕಿಂಚಿತ್’’ ಎನ್ನುವ ದೊಡ್ಡ ಮಾತು ಬರುತ್ತದೆ. `ಅದು ಬೇರೆ ಇದು ಬೇರೆ’ ಎನ್ನುವ ಬೇಧ ಅನ್ನೋದೇ ಇಲ್ಲ. `ಎಲ್ಲವೂ ಒಂದೇ’ ಎಂದು ಅದನ್ನು ಬಗೆಯಬಹುದು.

 ``ತ್ವಂ ಸ್ತ್ರೀ ತ್ವಂ ಪುಮಾನ ಅಸ್ತಿ , ತ್ವಂ ಕುಮಾರ, ಉತ್ವಾ ಕುಮಾರಿ ಅಸ್ತಿ, ತ್ವಂ ಜೀರ್ಣೋಸ್ತಿ,’’ - `ನೀನೇ ಸ್ತ್ರೀ, ನೀನೇ ಪುರುಷ , ನೀನೇ ಕುಮಾರ, ಕುಮಾರಿ, ವೃದ್ಧ, ಯುವಕ ಎಲ್ಲವೂ ಹೌದು’ ಎನ್ನುವುದು ಅಥರ್ವ ವೇದದ ಮಾತು.

``ಆತ್ಮಾ ತ್ವಂ ಗಿರಿಜಾ ಮತಿ ಸಹಚರಾ ಪ್ರಾಣಾ ಶರೀರಂ ಗೃಹಂ ಪೂಜಾತೇ ವಿಷಯೋಪಭೋಗ ರಚನಾ ನಿದ್ರಾ ಸಮಾಧಿ ಸ್ಥಿತಿಃ. ಸಂಚಾರ ಪದಯೋಹೋ, ಪ್ರದಕ್ಷಿಣ ವಿಧಿ ಸ್ತೋತ್ರಾಣಿ ಸರ್ವಾಗಿರೋಃ ಯದ್ಯತ್ ಕರ್ಮ ಕರೋಮಿ ತತ್ಥ ದಖಿಲಂ ಶಂಭೋ ತವಾರಾಧನಂ’’
– ಈ ಶಿವ ಸ್ತೋತ್ರ ರಾಷ್ಟ್ರಕವಿ ಕುವೆಂಪು ಅವರನ್ನು ಬಹಳ ವಾಗಿ ಆಕರ್ಷಿಸಿದ್ದು. – ಇದು ಶಿವನ ಶ್ಲೋಕವೂ ಹೌದು, ಸಮಾನತೆಯ ಸಂದೇಶವೂ ಹೌದು, ನಶ್ವರತೆಯ ಮಾತೂ ಹೌದು, ಆತ್ಮಜ್ಞಾನದ ತುಣುಕೂ ಹೌದು.

-       ಹೊಸ ಯುಗದ ಹಿಂದೂ ಧರ್ಮದ ಪ್ರತಿಪಾದಕರು ಹೆಜ್ಜೆ ಹೆಜ್ಜೆಗೆ ಉದಾಹರಿಸುವ ಗ್ರಂಥ ಭಗವದ್ ಗೀತೆ. ಅದರಲ್ಲಿಯೂ ಇಂತಹುದೇ ಆಶಯದ ಒಂದು ಮಾತು ಸಿಗುತ್ತದೆ.  -
`ಬ್ರಹ್ಮಾರ್ಪಣಂ ಬ್ರಹಂ ಹವಿಃ ಬ್ರಹ್ಮಾಗ್ನೋ ಬ್ರಹ್ಮಣಾಹುತಃ. ಬ್ರಹ್ಮೈವ ತೇನ ಗಂತವ್ಯ , ಬ್ರಹ್ಮ ಕರ್ಮ ಸಮಾಧಿನಹ’. - ``ಅರ್ಪಣ ಮಾಡುವವನು, ಆಗುವುದು, ತೆಗೆದುಕೊಳ್ಳುವವನು, ಅಗ್ನಿ, ಅದರಿಂದ ಸಿಗಲಿರುವದು, ಹಾಗೂ ಅದರ ದಾರಿ ಎಲ್ಲವೂ ಬ್ರಹ್ಮ ವೇ’’.

ಇಷ್ಟು ದೊಡ್ಡ ದರ್ಶನದ ಮಾತುಗಳನ್ನು ಹೇಳಿಕೊಟ್ಟ ನಮ್ಮ ಧರ್ಮ, ಅಣ್ಣ – ತಮ್ಮಂದಿರ ನಡುವೆ  ಒಡಕು ಹಚ್ಚಲು ಹೇಗೆ ಸಾಧ್ಯ? ಇಡಿ ಜಗತ್ತಿನಲ್ಲಿ ಇರುವ ಎಲ್ಲವೂ ಬ್ರಹ್ಮ, ವಿಷ್ಣು, ಶಿವ ಆದರೆ, ಅಸಮಾನತೆ ಹೇಗೆ ಇರಲು ಸಾಧ್ಯ? ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ, ಪ್ರದೇಶ, ಊಟದ ಪದ್ಧತಿ, ಮುಂತಾದ ಯಾವುದೇ ರೀತಿಯ ಬೇಧ ಇರಬಹುದು, ಅಂತಹುದರ ನಡುವೆ ಮೇಲು – ಕೀಳು ಎಂಬ ಮಾತು ಇರಲಿಕ್ಕೆ ಹೇಗೆ ಸಾಧ್ಯ?

ಇದೇ ಭಗವದ್ ಗೀತೆ ಯಲ್ಲಿಯೇ ಇನ್ನೊಂದು ಮಾತು ಇದೆ. ಅದು ಮತಾಂಧತೆ ಯ ಮಬ್ಬಿನಿಂದ ನಮ್ಮನ್ನು ಬಡಿದೆಬ್ಬಿಸುವ ಮಾತು. ``ವಿದ್ಯಾ ವಿನಯ ಸಂಪನ್ನೇ ಬ್ರಹ್ಮಣೇ ಗವಿ ಹಸ್ತಿನಿ. ಶುನಿಚೈವ ಸ್ವಪಕೇಚ ಪಂಡಿತಾ ಸಮದರ್ಶಿನಃ’’ – ವಿದ್ಯೆ-  ವಿನಯ ಉಳ್ಳವರು ಆಕಳು, ಆನೆ, ನಾಯಿ ಹಾಗೂ ನಾಯಿ ತಿನ್ನುವವರನ್ನು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಎನ್ನುವುದು ಇಲ್ಲಿನ ಆಶಯ. ನಾಯಿ ತಿನ್ನುವವರನ್ನೇ ಸಮಾನವಾಗಿ ನೋಡುವವರು ದನ ತಿನ್ನುವವರನ್ನು ಅಸಮಾನರನ್ನಾಗಿ ನೋಡುವುದು ಹೇಗೆ ಸಾಧ್ಯ? ಈ ಸಂದೇಹ ನನ್ನನ್ನು ಯಾವಾಗಲು ಕಾಡುತ್ತಿರುತ್ತದೆ.

ಇಷ್ಟೆಲ್ಲಾ ಸಮೃದ್ಧ ಪರಂಪರೆ ಹೊಂದಿದ ನಾವು ಬಹು ಸಂಸ್ಕೃತಿಯಿಂದ ದೂರ ಓಡುತ್ತಿರುವುದೇಕೆ? `` ಇದೆಲ್ಲಾ ನಮಗೆ ಗೊತ್ತೇ ಇಲ್ಲರೀ, ನಮಗಾರಿಗು ಹೇಳಿ ಕೊಡಲೇ ಇಲ್ಲ’’ ಅಂತೆಲ್ಲಾ ನಾವು ನೆವ ಹೇಳಲು ಸಾಧ್ಯವೇ ಇಲ್ಲವಲ್ಲವೇ?. ``ಹೋಗ್ರಿರಿ, ಮಲ್ಟಿ ಕಲ್ಚರಾಲಿಸಂ ಎನ್ನುವುದೆಲ್ಲಾ ಪಾಶ್ಚಿಮಾತ್ಯ ಕಲ್ಪನೆ. ಇಂಥದೆಲ್ಲಾ ನಮಗೆ ಹೇಳಕ್ ಬರಬೇಡಿ’’ ಅಂತನೂ ನಾವು ಹೇಳಲಾಗದು. ನಮ್ಮಲ್ಲೆ ಎಲ್ಲಾ ಇದೆ ! ನಾವು ಹೊರಗೆ ನೋಡುವುದು ಬೇಕಾಗೇ ಇಲ್ಲ. ಹೀಗೆಲ್ಲಾ ಇದ್ದಾಗ ನಮಗೆ ಬೇಕಾಗಿರುವುದು ಏನು? ಕೇವಲ ಆತ್ಮ ನಿರೀಕ್ಷಣೆ ಹಾಗೂ ಆತ್ಮ ವಿಮರ್ಶೆ, ಅಲ್ಲವೇ?

ಇಂತಹುದೆಲ್ಲ ಮಾತನಾಡಲು ಆರಂಭಿಸಿದ ತಕ್ಷಣ ಇದಕ್ಕೆ ಪ್ರತಿಕ್ರಿಯೆಯಾಗಿ ಒಂದು ದೊಡ್ಡ ದನಿ ಕೇಳಿ ಬರುತ್ತದೆ. ಅದೇನೆಂದರೆ- ಬಹು ಸಂಸ್ಕೃತಿ ಉಳಿಸುವುದು ಕೇವಲ  ಬಹು ಸಂಖ್ಯಾತರ ಕೆಲಸವೇ? ಅಲ್ಪ ಸಂಖ್ಯಾತರ ಕೆಲಸ ವಲ್ಲವೇ? ಎನ್ನುವುದು. ಅಲ್ಪ ಸಂಖ್ಯಾತರು ಎನ್ನುವ ಪದದ ಅರ್ಥ ದೇಶ ಹಾಗೂ ಕಾಲಕ್ಕೆ  ತಕ್ಕಂತೆ ಬದಲಾಗಬಹುದು ಎನ್ನುವ ಅರಿವಿಟ್ಟುಕೊಂಡೇ ಒಂದು ಮಾತನ್ನುನಾವು ನಮ್ಮ ನಮ್ಮಲ್ಲಿ ಆಡಿಕೊಳ್ಳಬಹುದು. – ಅದೇನೆಂದರೆ ಭಾಷೆ, ಧರ್ಮ, ಕೋಮು, ಜಾತಿ, ಲಿಂಗ, ಇತ್ಯಾದಿ ಯಾವುದೇ ರೀತಿಯ ಗುಂಪಿನ ಅಲ್ಪಸಂಖ್ಯಾತರಿರಲಿ , ಅವರಿಗೆ ಒಂದು ದೊಡ್ಡ ಜವಾಬ್ದಾರಿ ಇದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾರರು. ಯಾವುದೇ ಅಲ್ಪಸಂಖ್ಯಾತರ ಗುಂಪಿರಲಿ, ಎಷ್ಟೇ ದುರ್ಬಲರಿರಲಿ, ಅಪಾಯ ಅಥವಾ ತೊಂದರೆಗೆ ಒಳಗಾದವರಿರಲಿ, ಅವರಿಗೆ ನಮ್ಮ ಸಮಾಜದ ಬಹು ಸಂಸ್ಕೃತಿಯನ್ನು ಕಾಯ್ದುಕೊಂಡು ಹೋಗುವ ಹಾದಿಯಲ್ಲಿ ಮಹತ್ತರವಾದ ಜವಾಬುದಾರಿ ಇದೆ. ಇದನ್ನು ಅವರು ಅರಿಯಲಾರದೇ ಇರಲಾರರು ಎಂದು ನಾನು ನಂಬುತ್ತೇನೆ.

ಇದನ್ನು ನಾನು ಸೂಚ್ಯವಾಗಿ ಹೀಗೆ ಹೇಳಬಯಸುತ್ತೇನೆ. ಮೊದಲನೇಯದಾಗಿ ಬೇಕಾದದ್ದು ಇಂತಹ ವಿವಿಧ ಗುಂಪುಗಳಲ್ಲಿ ಏಕೋಭಾವ. ಇಂದಿಗೂ ವಿವಿಧ ರೀತಿಯ ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟಿಲ್ಲ. ಇದು ನಮ್ಮ ಸಮಾಜದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದ್ದೂ ಅದರ ಬಗ್ಗೆ ಮಾತನಾಡದೇ, ಏನೂ ಮಾಡದೇ ಸುಮ್ಮನಿರುವ  ಅನೇಕ ವಿಷಯಗಳಲ್ಲಿ ಒಂದಿರಬಹುದೇನೋ. ಒಗ್ಗಟ್ಟು ಹಾಗಿರಲಿ, ಅನುಕಂಪ, ಸಹಾನುಭೂತಿ ಹಾಗೂ ಏಕೋಭಾವಗಳಾದರೂ ಬೇಡವೇ? ಇವು ಇಲ್ಲವೆಂದಾದಲ್ಲಿ ಇವುಗಳನ್ನು ಹುಟ್ಟಿಸುವ ಕೆಲಸ ಆರಂಭವಾಗಬೇಕಲ್ಲವೇ? ಒಂದು ರೀತಿಯ ಅಲ್ಪ ಸಂಖ್ಯಾತರು ಅಳುತ್ತಿರುವಾಗ ಇನ್ನೊಂದು ರೀತಿಯ ಅಲ್ಪ ಸಂಖ್ಯಾತರು ನಗಬಾರದಲ್ಲವೇ? ಇದನ್ನು ಮಾಡಬೇಕಾದವರು ಯಾರು?
 ಅಲ್ಪ ಸಂಖ್ಯಾತರ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಇತರ ಕ್ಷೇತ್ರದ ನಾಯಕರು ಇಂಥ ಮಹತ್ತರ ಜವಾಬುದಾರಿ ಹೊರಬೇಕಾದವರು ಅಲ್ಲವೇ?

ಇದು ಕೇವಲ ಘೋಷಣೆ, ಭಾಷಣ, ಮೊಂಬತ್ತಿ ಬೆಳಕಿನ ಮೆರವಣಿಗೆಯ ಫಲಕದ ಮೇಲಿನ ಬರವಣಿಗೆ ಆಗಬಾರದು. ಇದು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಲೇ ಬೇಕಾದ ನೀತಿಯೂ ಆಗಬೇಕು. ಇನ್ನೊಮ್ಮೆ ಹೇಳುತ್ತೇನೆ, ಇದು ಎಲ್ಲ ರೀತಿಯ ಅಲ್ಪ ಸಂಖ್ಯಾತರಿಗೂ ಲಾಗೂ ಆಗುತ್ತದೆ.

ಎರಡನೇಯದು ಸಹಬಾಳ್ವೆ. ಸಮಾಜವೆಂಬುದೊಂದು ಕುಟುಂಬ ಎನ್ನಬಹುದಾದರೆ ಇಲ್ಲಿ ಜೊತೆಗೂಡಿ ಬಾಳಬೇಕಾದವರು ದೊಡ್ಡ ಮನಸ್ಸು ಮಾಡಿ ಒಬ್ಬರನ್ನೊಬ್ಬರು ಒಪ್ಪಬೇಕು. ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಪ್ರತಿಷ್ಠೆ ಎನ್ನುವುದು ಹೋಗಿ, ಪ್ರೀತಿ, ಸಹಚರ್ಯ ತಲೆದೋರಬೇಕು. ಒಬ್ಬರ ಜೀವನ ಶೈಲಿಯನ್ನು ಇನ್ನೊಬ್ಬರು ಅನುಕರಿಸುವುದು ದೂರವಿರಲಿ, ಅದನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಕಲಬುರ್ಗಿಯ ಬಂದೇ ನವಾಜರ ಮಾತೊಂದು ಸಹಬಾಳ್ವೆಯ ಬಗ್ಗೆ ನಮ್ಮನ್ನು ಚಿಂತನೆಯನ್ನು ಸ್ಪಷ್ಟಪಡಿಸಬಹುದೇನೋ - ``ಪಾನಿ ಮೆ ನಮಕ್ ಡಾಲ್ ಔರ್ ದೇಖ್ ಉಸೆ. ಮಾನಿ ಮೆ ನಮಕ್ ಘುಲ್ ಜಾಯೇಗಾ ತೊ ನಮಕ್ ಕಹೆ ಕಿಸೆ?’’ – ನೀರಿನಲ್ಲಿ ಉಪ್ಪು ಕರಗಿದ ನಂತರ ಉಪ್ಪಂತ ಕರೆಯುವುದು ಯಾವುದನ್ನು?

 ಇನ್ನು `ಸೌಹಾರ್ದ’ ಎನ್ನುವುದು ಎರಡೂ ಕಡೆಗಳಲ್ಲಿರುವರ ಕೆಲಸ. ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಕತೆ ಹೇಳುತ್ತೇನೆ. ಬೀದರ್ ಜಿಲ್ಲೆಯ ಶ್ರೀ ಮಾಣಿಕ ಪ್ರಭುಗಳ ಪವಿತ್ರ ಸಂಸ್ಥಾನದಲ್ಲಿ ದತ್ತ ಜಯಂತಿ ಆಚರಿಸಿದಷ್ಟೇ ಸಂತಸದಿಂದ ಸೂಫಿ ಸಂತ ಮೆಹಬೂಬ ಸುಬಾನಿ ಅವರ 11 ನೇ ದಿನ (ಗ್ಯಾರಾಹವಿ) ಆಚರಿಸುತ್ತಾರೆ. ಅಷ್ಟೂರಿನ ಅಹಮದ್ ಷಾ ವಲಿಯ ಹುಟ್ಟಿದ ದಿನವನ್ನು ಅಲ್ಲಮ ಪ್ರಭು ಜಯಂತಿಯೆಂದು ಆಚರಿಸಲಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಮೌಲಾಲಿಯ ಗುಡಿ ಇದೆ, ಮೃತ್ಯುಂಜಯ ಸ್ವಾಮಿಯ ದರ್ಗಾ ಇದೆ. ಇವೆಲ್ಲವೂ ನನಗೆ ಸೌಹಾರ್ದದ ಸಂಕೇತವಾಗಿ ಕಂಡಿವೆ. ಇವುಗಳ ಬಗ್ಗೆ ನಾನು ಬರೆದಿದ್ದೇನೆ, ಮಾತಾಡಿದ್ದೇನೆ.

ಇವುಗಳ ಬಗ್ಗೆ ರಾಷ್ಟ್ರ ಮಟ್ಟದ ಟಿ. ವಿ ವಾಹಿನಿಯೊಂದರಲ್ಲಿ ಸುದ್ದಿ ಮಾಡಬಹುದು ಎಂದು ನಾನು ದೆಹಲಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ನನ್ನ ಸ್ನೇಹಿತರೊಬ್ಬರಿಗೆ ಸೂಚಿಸಿದೆ. ಅವರು ``ಅದು ಕೇವಲ ಜಾನಪದ ಇಸ್ಲಾಂ ಇರಬಹುದು, ನೈಜ ಇಸ್ಲಾಂ ಅಲ್ಲ. ಇಂತಹ ಆಚರಣೆ ಗಳಲ್ಲಿ ಪಾಲುಗೊಳ್ಳುವವರು ನಿಜ ಮುಸ್ಲೀಮರು ಆಗಿರಲು ಸಾಧ್ಯವಿಲ್ಲ’’ ಎಂದು ಬಿಟ್ಟರು. ಇಸ್ಲಾಂ ಧರ್ಮಕ್ಕೆ ಸೇರಿರುವ ಅವರು ಈ ಮಾತು ಹೇಳಿದ್ದು ನನಗೆ ತುಂಬ ನಿರಾಸೆ ಮೂಡಿಸಿತು.

ಆಗ ನನಗೆ ನೆನಪಾಗಿದ್ದು `ಸಾಕ್ಷರಃ ವಿಪರೀತೊ ರಾಕ್ಷಸಃ’ ಎನ್ನುವ ಮಾತು. `ಓದಿದವರು ಉಲ್ಟಾ ವಿಚಾರ ಮಾಡಿದರೆ ಅಮಾನುಷರಾಗಿ ವರ್ತಿಸಬಲ್ಲರು’ ಎಂದು ಅದರ ಅರ್ಥ. ನಾನು ಅದನ್ನು `ಹೆಚ್ಚು ಓದಿದವರು ರಾಕ್ಷಸರು’ ಎಂದು ತಮಾಷೆಗೆ ಹೇಳುತ್ತಾ ಇರುತ್ತೇನೆ. ಹೀಗಾದರೆ ಸೌಹಾರ್ದದ ತಾಣಗಳಾದ ದರ್ಗಾ- ಸೂಫಿ ತಾಣಗಳ ವಾತಾವರಣಕ್ಕೆ ಧಕ್ಕೆ ಬರುತ್ತಿರುವುದು ಯಾರಿಂದ?

ಬಲಪಂಥೀಯ ಶಕ್ತಿ ಗಳಿಂದ ಅಲ್ಪ ಸಂಖ್ಯಾತರ ಸಂಸ್ಕೃತಿಯ ಮೇಲೆ ಹೇಗೆ ಹಲ್ಲೆ ನಡೆಯುತ್ತದೋ ಹಾಗೆಯೇ ದೇಸಿ ಧಾರ್ಮಿಕ ಪರಂಪರೆಯ ಮೇಲೆ, ನಮ್ಮ ಸ್ನೇಹಿತರು ಹೇಳಿದ ಹಾಗೆ ``ಜಾನಪದ ಇಸ್ಲಾಮಿನ’’ ಮೇಲೆ ದಾಳಿ ಮಾಡುತ್ತಿರುವವರು ತಥಾಕಥಿತ `ಶಿಕ್ಷಣ ಪಡೆದ’ ಮುಸಲ್ಮಾನರು.

ನಾವು ಆಧುನಿಕ -ಲಿಬರಲ್ ಇಸ್ಲಾಂನವರು, ಧರ್ಮವನ್ನು ಚಾಚೂ ತ‍ಪ್ಪದೇ ಪಾಲಿಸಿಕೊಂಡು ಬರುತ್ತಿರುವವರು ಎಂದು ಹೇಳಿಕೊಳ್ಳುವವರು, ದೊಡ್ಡ ದೊಡ್ಡ ಸಭೆಗಳಲ್ಲಿ ಭಾಷಣ ಹೊಡೆಯುವವರು, ಈ ರೀತಿಯ ಹಬ್ಬ- ಉರುಸುಗಳನ್ನು ಕೀಳಾಗಿ ನೋಡುತ್ತಾರೆ. ಈ ದೇಶದಲ್ಲಿ ಇಸ್ಲಾಂ ಹರಡಿದ್ದೇ ಸೂಫಿ ಸಂತರಿಂದಾಗಿ ಎಂಬುದನ್ನು ಅರಿಯದೇ ಮಾತಾಡುತ್ತಾರೆ.

ಇಂತಹ ಜಾಗೃತ ಸ್ಥಳಗಳಿಂದ ಸೌಹಾರ್ದ ಹೆಚ್ಚುವುದು ಎನ್ನುವುದನ್ನು ಮರೆತು, ಪ್ಯೂರಿಟನ್ ಇಸ್ಲಾಂ ನ ಪ್ರತಿಪಾದಕರಾಗುತ್ತಾರೆ. ``ನಮ್ಮಪ್ಪ   -- ಅಜ್ಜ ತಪ್ಪು ಮಾಡಿರಬಹುದು, ನಾನು ಮಾಡುವುದಿಲ್ಲ,’’ ಎಂಬ ಹುಂಬತನದ ಮಾತಾಡುತ್ತಾರೆ.

ಇಂತಹ ಶಿಕ್ಷಿತರು ದರ್ಗಾಗಳಿಗೆ, ಸೂಫಿಗಳಿಗೆ ಸಂಬಂಧ ಪಟ್ಟ ಸ್ಥಳಗಳಿಗೆ ಹೋಗುವುದು ತಪ್ಪು, ಅದೆಲ್ಲ ನಮ್ಮ ಪವಿತ್ರ ಪುಸ್ತಕದಲ್ಲಿ ಬರೆದಿಲ್ಲ ಅಂತೆಲ್ಲ ಕಮ್ಮಿ ಓದಿದ ಮಸಲ್ಮಾನರ ತಲೆಯಲ್ಲಿ ತುಂಬುತ್ತಾರೆ. ಇದರ ಅಪಾಯಗಳು ನಮ್ಮೆಲ್ಲರಿಗೂ ಎಷ್ಟು ಬೇಗ ಅರ್ಥ ವಾಗುತ್ತದೆಯೋ ಅಷ್ಟು ಒಳ್ಳೆಯದು.

ಇಂತಹುದೇ ಮಾತುಗಳನ್ನು ಲಿಂಗ, ಭಾಷೆ, ಜನಾಂಗ, ಹಾಗೂ ಇತರ ಅಲ್ಪಸಂಖ್ಯಾತರ ಬಗ್ಗೆ ಹೇಳಬಹುದು. ಇಂತಹ ಗುಂಪುಗಳಿಗೆ ತಮ್ಮ ತಮ್ಮಲ್ಲಿ ಏಕತೆ ಎಷ್ಟು ಮುಖ್ಯವೋ, ಒಂದು ಗುಂಪು ಇತರ ಗುಂಪುಗಳೊಂದಿಗೆ ಏಕತೆ, ಸಾಹಚರ್ಯ ಸಾಧಿಸುವುದೂ ಅಷ್ಟೇ ಮುಖ್ಯ.

ಬಹುಸಂಖ್ಯಾತರ ಬಲವನ್ನು ನಾವು ಎಷ್ಟು ಸಂದೇಹದಿಂದ ನೋಡುತ್ತೇವೋ, ಅಲ್ಪ ಸಂಖ್ಯಾತರ ನಡುವಿನ ಇಂತಹ ಕಂದಕಗಳನ್ನೂ ನಾವು ಸಂಶಯದಿಂದ ನೋಡಬೇಕು. ಬಹುಸಂಸ್ಕೃತಿಯ ಸಹಬಾಳ್ವೆ ಸಾಧ್ಯವಾಗಿಸುವುದು ಇಬ್ಬರದೂ ಜವಾಬುದಾರಿ. ಸಮ ಸಮಾಜದ ದಾರಿಯಲ್ಲಿ  ಬಿದ್ದ ಕಲ್ಲುಗಳನ್ನು ಎತ್ತಿಡುವುದು ಎರಡೂ ಕೈಗಳ ಕೆಲಸ.

ಕೊನೆಯದಾಗಿ, ಬಹುಸಂಖ್ಯಾತರ ಬಗ್ಗೆ ಅಲ್ಪಸಂಖ್ಯಾತರಲ್ಲಿ ಇರಬಹುದಾದ ಅಂಜಿಕೆಗಳನ್ನಾಗಲೀ, ಇವರಿಗೆ ಅವರ ಬಗ್ಗೆ ಇದ್ದಿರಬಹುದಾದ ಸಂದೇಹಗಳನ್ನಾಗಲೀ ಕೊನೆಗಾಣಿಸುವ ಸರಳ ವಿಧಾನವೆಂದರೆ ಮಾತುಕತೆ. ಇದು ಸರಕಾರಿ ಪ್ರಾಯೋಜಿತ ಸಭೆಗಳಲ್ಲಿ, ಹಾರ ಹಾಕಿಸಿಕೊಂಡು, ಸ್ವಾಗತ ಮಾಡಿಸಿಕೊಂಡು ನಾಯಕರು, ಚಿಂತಕರು ಮಾಡುವ ಮಾತುಕತೆಗಳಲ್ಲ. ಜನರ ನಡುವೆ, ಅಕ್ಕ – ಪಕ್ಕದವರ ನಡುವೆ ದಿನ ನಿತ್ಯ ಆಗಬಹುದಾದ ಮಾತುಕತೆಗಳು. ಇದೇನೂ ನಮ್ಮ ಸಮಾಜಕ್ಕೆ ಹೊಸದಲ್ಲ. ಸಾವಿರಾರು ವರ್ಷಗಳಿಂದ ನಾವು ಇದನ್ನು ಮಾಡುತ್ತಾ ಬಂದವರು. ನಮ್ಮ ಅಜ್ಞಾನದಿಂದಾಗಿ ದೊಡ್ಡವರಾದ ಚಿಂತಕರು ಹಾಗೂ ನಮ್ಮ ಸೀಮಿತ ಆಯ್ಕೆಗಳಿಂದಾಗಿ ರಾಜಧಾನಿಗಳಿಗೆ ಹೋದ ದೊಡ್ಡ ನಾಯಕರು ನಮ್ಮ ತಲೆ ಕೆಡಿಸಿದ್ದಕ್ಕಾಗಿ ಈ ಮಾತುಕತೆಯ ಪರಂಪರೆಗೆ ಸ್ವಲ್ಪ ಮಟ್ಟಿಗೆ ನಿಲುಗಡೆ ಆಗಿದೆ. ದೊಡ್ಡವರನ್ನು ಅವರ ಪಾಡಿಗೆ ಬಿಟ್ಟು ನಾವು ನಮ್ಮಜ್ಜ- ಮುತ್ತಾತಂದಿರು ಮಾಡುತ್ತಿದ್ದ ಹಾಗೆ ಸಹಜ – ಸರಳ ಮಾತುಕತೆಗಳನ್ನು ಆರಂಭಿಸಿದರೆ, ಒಬ್ಬರು ಇನ್ನೊಬ್ಬರ ಮನೆಗೆ ಹೋಗಿ- ಬಂದು ಮಾಡಿದರೆ, ದಿನ ನಿತ್ಯದ ಕೆಲಸಗಳನ್ನು ಒಂದಾಗಿ ಮಾಡಿದರೆ, ಪರಿಸ್ಥಿತಿ ಎಷ್ಟೋ ಸುಧಾರಿಸಬಹುದು.  ನಾವು ಮಾಡಬಹುದಾದ ಅನೇಕ ತಪ್ಪುಗಳನ್ನು ತಪ್ಪಿಸಬಹುದು. ಇದನ್ನು ತಿಳಿಯಲು ಯಾವುದೋ ಕ್ಲಿಷ್ಟಕರ ವಾದ ಸೂತ್ರ ಬೇಕಾಗಿಲ್ಲ. ಇದು ಸಾಮಾನ್ಯ ಜ್ಞಾನದ ವಿಷಯ.

ಇದು ಮುಗಿಯಲಾರದ ಸಂಭಾಷಣೆಗೆ. ಇದಕ್ಕೆ ಕೊನೆಯ ಮಾತು ಎಂಬುದು ಉಂಟೇ? ಆದರೂ ಒಂದು ಮಾತನ್ನು ಮತ್ತೆ ಮತ್ತೆ ಆಡಿಕೊಳ್ಳಬಹುದು.

ಬಹುಸಂಸ್ಕೃತಿ ಎನ್ನುವುದು ಒಂದು ಚಂದದ ಕಾಮನ ಬಿಲ್ಲು ಎನ್ನುವುದಾದರೆ, ಎಲ್ಲಾ ಬಣ್ಣಗಳೂ ತಮ್ಮ ತಮ್ಮ ಸ್ಥಾನದಲ್ಲಿ ಇರಬೇಕಲ್ಲವೇ? ತಮ್ಮ ತಮ್ಮ ಮೂಲ ವರ್ಣದ ಹೊಳಪನ್ನು ಹೊರ ಹೊಮ್ಮಬೇಕಲ್ಲವೇ? ಅವುಗಳ ಸಾಲಿನಲ್ಲಿ ಒಂದು ಹೆಚ್ಚು ಕೆಲಸ ಮಾಡಿ, ಇನ್ನೊಂದು ಸೋಮಾರಿಯಾಗಿ ಉಳಿದರೆ ಕಾಮನ ಬಿಲ್ಲನ್ನು ನೋಡಿ ಬೆಳೆಯುವ ಎಳೆಯರಿಗೂ ಅನ್ಯಾಯ, ಬಣ್ಣಗೇಡಿಯಾದ ಕಾಮನ ಬಿಲ್ಲಿಗೂ ಬೇಜಾರು.
ಆದರೆ ಇದನ್ನು ತಪ್ಪಿಸಲು ಇನ್ನೂ ಅನೇಕ ಅವಕಾಶಗಳು ಇವೆ. ಕಾಲ ಇನ್ನೂ ಮಿಂಚಿ ಹೋಗಿಲ್ಲ ವೆನ್ನುವುದೇ ನಮಲ್ಲಿ ಆಶಾಭಾವನೆ ಮೂಡಿಸುವ ಸಂಗತಿ.

ಎಲ್ಲರಿಗೂ ನಮಸ್ಕಾರ. ಧನ್ಯವಾದಗಳು.

ಹೃಷಿಕೇಶ ಬಹದ್ದೂರ ದೇಸಾಯಿ
ವರದಿಗಾರರು, ದಿ ಹಿಂದೂ, ಬೀದರ್

ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ
ಎಪ್ರಿಲ್ 18, 2017

--