ಕನ್ನಡದ ಫ್ಯೂಚರ್ ಬಗ್ಗೆ
ಚಿಂತಿತರಿಗೊಂದು ಟಿಪ್ಪಣಿ.
ಕರ್ನಾಟಕದಲ್ಲಿ ಹಿಂದಿ
ಹೇರಿಕೆಯಾಗುತ್ತಿದೆ ಎಂದು ನನ್ನ ಫೇಸುಬುಕ್ಕು ಗೆಳೆಯರು ಚಿಂತಿತರಾಗಿದ್ದಾರೆ.
ಅದರಲ್ಲಿ ವಸಂತ ಶೆಟ್ಟರು, ವಲ್ಲೀಷ
ಕುಮಾರ್ ಅವರು, ಅಮಿತ ಕುಮಾರ್ ಅವರು, ಸುರೇಶ ಅವರು, ಹಾಗೂ ಇತರರು ಬರೆದ ಪೋಸ್ಟುಗಳನ್ನು
ನೋಡಿದ್ದೇನೆ. ಅವರ ಕಾಳಜಿ ನನಗೆ
ಅರ್ಥವಾಗುತ್ತದೆ. ಆದರೆ ಈ ವಿಷಯದ ಬಗ್ಗೆ ನನಗೆ ಬೇರೆ ಅಭಿಪ್ರಾಯವಿದೆ. ಇದರ ಬಗ್ಗೆ ಹಿಂದೆಯೇ
ಬರೆಯಬೇಕಾಗಿತ್ತು. ಪ್ರಸಂಗ ಬಂದಿರಲಿಲ್ಲ. ಅಥವಾ ಇದು ಇಷ್ಟು ದೀರ್ಘಕ್ಕೆ ಹೋಗಿರಿಲಿಲ್ಲ. ಇವನು
ತಮ್ಮೂರಿನ ಪ್ರೀತಿಯಿಂದ, ಉತ್ತರ ಕರ್ನಾಟಕದ ಅಭಿಮಾನದಿಂದ ಮಾತಾಡುತ್ತಾನೆ, ಅಥವಾ ದಕ್ಷಿಣ
ಕರ್ನಾಟಕದ / ಕರಾವಳಿ ಕರ್ನಾಟಕದ ದ್ವೇಷದಿಂದ ಹೀಗನ್ನುತ್ತಾನೆ ಎಂದು ಅಪಾರ್ಥ ಮಾಡಿಕೊಳ್ಳಬಹುದು
ಎಂದು ಕೂಡ ನಾನು ಸುಮ್ಮನೇ ಇದ್ದಿರಬಹುದು. ಹಾಗೆಂದು ನಮಗೆ `ನಮ್ಮದಲ್ಲದ’ ಕನ್ನಡದ ಬಗ್ಗೆ
ನಿರಾಸಕ್ತಿ, ಅಗೌರವ, ದ್ವೇಷ ವಿಲ್ಲ. ಅದರ ಬಗ್ಗೆ ಸ್ಪಷ್ಟೀಕರಣ ಕೊಡುವ ಅನಿವಾರ್ಯತೆಯೂ ಇಲ್ಲ.
ಸೂಳೆಮಗ
ನಾನು ಕೆಲಸದ ನಿಮಿತ್ತ ಮಂಗಳೂರಿನ
ಪತ್ರಿಕೆ ಕಚೇರಿ ಗೆ ಒಮ್ಮೆ ಹೋದಾಗ ನಮ್ಮ ಸ್ನೇಹಿತರೊಬ್ಬರು ತಮ್ಮ ಸಹೋದ್ಯೋಗಿಯೊಬ್ಬರನ್ನು ಪರಿಚಯ
ಮಾಡಿಕೊಟ್ಟರು. ನಿಮ್ಮದು ಎಲ್ಲಾತು? ಅಂತ ಅವರು ಕೇಳುವುದರೊಳಗೆ ಬಾಗಲಕೋಟೆಯಿಂದ ಬಂದಿದ್ದ ನನ್ನ
ಗೆಳೆಯರು ನಂದು ಬಾಗಲ್ಕೋಟ್ರಿ, ಇವ್ರದು ಧಾರವಾಡ್ರಿ, ಅಂತ ಅಂದರು. `` ಒಹೋ ನೀವು ಒಟ್ಟಿನಲ್ಲಿ
ಸೂಳೆಮಕ್ಕಳ ಏರಿಯಾದವರೂ ಅನ್ನಿ’’, ಅಂತ ಅವರು ಜೋರಾಗಿ ನಕ್ಕರು. ಅವರ ಕಚೇರಿಯ ಇತರರು ಅವರೊಂದಿಗೆ
ದನಿಗೂಡಿಸಿ ನಕ್ಕರು. ಅವರು ನಮ್ಮ ಮುಸುಡಿ ನೋಡಿ ನಕ್ಕರೋ ನಮ್ಮ ಮಾತನ್ನು ಕೇಳಿ ನಕ್ಕರೋ
ಗೊತ್ತಾಗದೇ ನಾವು ಪೆಕರರಂತೆ ನಿಂತೆವು. ``ಅಲ್ಲ ಸ್ವಾಮಿ, ನಾವು –ನೀವೂ ಅಣ್ಣ ತಮ್ಮಂದಿರು. ನೀವು
ಯಾರ ಮಕ್ಕಳೋ, ನಾವೂ ಅವರ ಮಕ್ಕಳೇ,’’ ಅಂದೆ ನಾನು. ಅವರಿಗೆ ಎಷ್ಟು ನಾಟಿತೋ ಗೊತ್ತಿಲ್ಲ. ಅದೇ
ಊರಿನವರಾದ ನಮ್ಮ ಇನ್ನೊಬ್ಬ ಸ್ನೇಹಿತರು ನಮಗೆ ಕಸಿವಿಸಿ ಆದದ್ದನ್ನು ಗಮನಿಸಿ ಊಟಕ್ಕೆ ಹೋಗೋಣ
ಬನ್ನಿ ಅಂತ ನಮ್ಮನ್ನು ಕರೆದುಕೊಂಡು ಹೊರಗೆ ನಡೆದರು.
``ಉತ್ತರ ಕರ್ನಾಟಕದವರು
`ಸೂಳೆಮಕ್ಕಳು’ ಅಂತ ಮಾತು ಮಾತಿಗೊಮ್ಮೆ ಹೇಳುತ್ತಾರೆ, ಅದರಿಂದ ಅವರ ಲೆವಲ್ಲು ಗೊತ್ತಾಗುತ್ತದೆ,
ತಾವು ಅನಾಗರಿಕರು ಅಂತ ತಾವೇ ತೋರಿಸಿಕೊಳ್ಳುತ್ತಾರೆ’’ ಎಂದು ಅವರು ನಂಬಿದಂತೆ ಕಾಣುತ್ತದೆ.
ಈ ಪದದ ಆಚೆ-ಈಚೆ ಸ್ವಲ್ಪ ನೋಡೊಣ.
ಈ ಪದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇದೆ. ಕನ್ನಡದಲ್ಲೂ ಇದೆ. ಕನ್ನಡದ ಉಪಭಾಷೆಗಳಾದ ತುಳು,
ಕೊಂಕಣಿ, ಬ್ಯಾರಿ, ನವಾಯತಿ, ಹವಿಗನ್ನಡ ಗಳಲ್ಲೂ ಇದೆ. ನೆರೆ ಭಾಷೆಗಳಾದ ತೆಲುಗು, ತಮಿಳು,
ಮರಾಠಿ, ಗಳಲ್ಲೂ ಇದೆ.
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ
ಬಡ್ಡೀಮಗ, ಬಡ್ಡೆತ್ತೆ (ಬಡ್ಡಿ ಹೆತ್ತದ್ದೇ) ಇತ್ಯಾದಿ ರೂಪಗಳಲ್ಲಿ ಇದು ಬಳಕೆಯಾಗತ್ತದೆ. ಕೊಂಕಣಿ
ಯಲ್ಲಿ ಚೆಡೆಚ್ಯಾ ಎಂತಾಗಿ ಬಳಕೆಯಲ್ಲಿದೆ. ಇತರ ಭಾಷೆಗಳಲ್ಲಿ, ಬೇರೆ ಬೇರೆ ಪದಗಳು ಹಾಗೂ ಬೇರೆ
ಬೇರೆ ರೂಪಗಳಲ್ಲಿ ಈ ಪದವನ್ನು ಎಲ್ಲರೂ ಪುಂಖಾನುಪುಂಖವಾಗಿ ಬಳಸುತ್ತಾರೆ.
ಕನ್ನಡ ಪ್ರೀತಿ
ಕನ್ನಡ ಪ್ರೀತಿ ಎಂದರೆ ಇತರ ಭಾಷೆಯ
ದ್ವೇಷ ಅಲ್ಲ. ಇದು ಎಲ್ಲರಿಗೂ ಗೊತ್ತಿರುವ ಮಾತು. ಉತ್ತರ ಕರ್ನಾಟಕದ ಜನ ಎಷ್ಟು ಬೇರೆ ಬೇರೆ
ಭಾಷೆಗಳನ್ನು ಮಾತನಾಡುತ್ತಾ ಬೆಳೆಯುತ್ತಾರೋ, ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎಷ್ಟೊಂದು
ವಿವಿಧ ಭಾಷೆಗಳನ್ನು ಬಳಸುತ್ತಾರೋ, ಅಷ್ಟೇ ಸಂಖ್ಯೆಯ, ಅಷ್ಟೇ ವೈವಿಧ್ಯತೆಯ ಭಾಷೆಗಳನ್ನು ದಕ್ಷಿಣ
ಕರ್ನಾಟಕದ, ಕರಾವಳಿ ಕರ್ನಾಟಕದ ಜನ ಬಲ್ಲರು, ಬಳಸುತ್ತಾರೆ.
ಮುಂಬೈ ಕರ್ನಾಟಕದ
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರದ ವರು ಮರಾಠಿ, ಉರ್ದು ಮಾತಾಡಿದರೆ, ಹೈದರಾಬಾದ್
ಕರ್ನಾಟಕದ ಬೀದರ್, ಗುಲಬರ್ಗಾ, ಯಾದಗೀರ್, ಕೊಪ್ಪಳ, ರಾಯಚೂರಿನವರು ತೆಲುಗು, ಮರಾಠಿ, ಉರ್ದು
ಮಾತನಾಡುತ್ತಾರೆ.
ಅಂತೆಯೇ ಮಂಗಳೂರು- ಉಡುಪಿಯವರು
ತುಳು, ಕೊಂಕಣಿ, ಬ್ಯಾರಿ ಗಳನ್ನೂ, ಕಾರವಾರದವರು ಕೊಂಕಣಿ, ನವಾಯಿತಿಗಳನ್ನು, ಕೋಲಾರ, ತುಮಕೂರು,
ಚಿತ್ರದುರ್ಗ, ದವರು ತೆಲುಗನ್ನೂ, ಕೆಜಿಎಫ್, ಚಾಮರಾಜನಗರ ದವರು ತಮಿಳನ್ನೂ, ಮಡಿಕೇರಿಯವರು
ಮಲಯಾಳ, ಕೊಡವ ಭಾಷೆಗಳನ್ನು , ಮಾತನಾಡುತ್ತಾರೆ. ಇದು ಸಹಜ ಮತ್ತು ಸ್ವಾಭಾವಿಕ. ಇನ್ನು ನಮ್ಮ ಕಾಲದ ಹಸ್ತಿನಾಪುರವಾದ ಬೆಂಗಳೂರಿನವರು ಇವೆಲ್ಲವನ್ನೂ
ಮಾತಾಡುತ್ತಾರೆ, ಇಂಗ್ಲೀಷು, ಫ್ರೆಂಚು, ಜಪಾನೀಸು ಸೇರಿದಂತೆ.
ಇವರು ಯಾರೂ, ಒಂದು ಭಾಷೆಯ ಮೇಲಿನ ಸಿಟ್ಟಿನಿಂದ
ಇನ್ನೊಂದು ಭಾಷೆ ಕಲಿತಿರುವುದಿಲ್ಲ. ಇದನ್ನು ಯಾರಿಗೂ ತಿಳಿಸಿ ಹೇಳಬೇಕಾಗಿಲ್ಲ.
ಹಿಂದಿ
ಎಲ್ಲಾ ಸರಿ, ಈ ಹಿಂದಿ ಎಂದರೆ
ಏನು? ನಾವೆಲ್ಲ ಸಾಮಾನ್ಯವಾಗಿ ಹಿಂದಿ ಎನ್ನುವ ಪದ ಬಳಸಿದಾಗ ಅದು ಒಂದು ಭಾಷೆ ಎನ್ನುವ
ಅರ್ಥದಿಂದಲ್ಲ, ಅದು ಭಾಷಾ ಸಮೂಹ. ಉರ್ದು, ಹಿಂದುಸ್ತಾನಿ, ದಖನಿ, ಹರಿಯಾಣವಿ, ರಾಜಸ್ತಾನಿ,
ಬ್ರಿಜ ಭಾಷಾ, ಮಾಗಧಿ, ಔಧಿ, ಉತ್ತರಾಂಚಲಿ, ಜಾರ್ಖಂಡಿ, ಹಾಗೂ ಇತರ ಭಾಷೆಗಳು ಇದರಲ್ಲಿ ಕೂಡಿವೆ.
ಪ್ರತಿಯೊಂದು ಬೇರೆ ಇದ್ದರೂ ಸಹ ಅವೆಲ್ಲದರ ಅಸ್ಥಿಪಂಜರ ಒಂದೇ. ಉರ್ದು ಎನ್ನುವುದು ಟರ್ಕಿಷ್
ಭಾಷೆಯ ಪದ. ಸೇನೆ, ದಂಡು, ಗುಂಪು, ಟೆಂಟು, ಎನ್ನುವುವು ಅದರ ಅರ್ಥಗಳು.
ಸುಮಾರು 11-12 ಶತಮಾನದ ಹೊತ್ತಿಗೆ
ದೆಹಲಿಯ ಸುಲ್ತಾನರು ದಕ್ಷಿಣ ವನ್ನು ಆಳತೊಡಗಿ ಇಲ್ಲಿನವರನ್ನು ಸೈನ್ಯಕ್ಕೆ ಸೇರಿಸಿಕೊಂಡರು. ಇವರು
ಹೋಗಿ ಅಲ್ಲಿ ದೆಹಲಿಯ ದಂಡು ಪ್ರದೇಶದಲ್ಲಿ ಟೆಂಟು ಹಾಕಿಕೊಂಡು ಇರತೊಡಗಿದರು. ಶಾಲೆಗೆ ಹೋದ ಹುಡುಗರು
ತಮ್ಮ ಅಮ್ಮಂದಿರು ಕೊಟ್ಟ ಡಬ್ಬಿಗಳಿಂದ ತಿಂಡಿ ತೆಗೆದು ಒಬ್ಬರಿಗೊಬ್ಬರು ಕೊಟ್ಟು ಎಲ್ಲವನ್ನೂ
ಕಲಿಸಿ ತಿಂದಂತೆ, ತಮ್ಮ ತಮ್ಮ ಭಾಷೆಯ ಪದಗಳನ್ನು, ಗ್ರಾಮಾಂತರ ದೆಹಲಿಯ ಪ್ರದೇಶದಲ್ಲಿ ಚಾಲ್ತಿ
ಯಲ್ಲಿ ಇದ್ದ ವ್ಯಾಕರಣದ ದಾರಕ್ಕೆ ಪೋಣಿಸಿ ಮಾತಾಡಲು ಆರಂಭಿಸಿದರು. ಉದಾಹರಣೆಗೆ `ಮೋತಿ ಚೂರ್ ಲಡ್ಡು’,
ಎನ್ನುವ ಮಾತಿನಲ್ಲಿ ಹಿಂದಿ, ಮರಾಠಿ ಮತ್ತು ಕನ್ನಡ ಶಬ್ದಗಳು ಇರುವುದನ್ನು ಗಮನಿಸಿ.
ಇನ್ನು ನಮ್ಮ ರಾಜಕೀಯ ಇತಿಹಾಸ ದ
ಪ್ರಭಾವದಿಂದ ಪರ್ಷಿಯನ್ ಹಾಗೂ ಉರ್ದು ಶಬ್ದಗಳು ನಮ್ಮ ಭಾಷೆಗಳಲ್ಲಿ ಗಣನೀಯ ಪ್ರಮಾಣದ ಲ್ಲಿ ಇವೆ.
ಆಡಳಿತ ಸಂಬಂಧಿ ಶಬ್ದಗಳಾದ ತಹಶೀಲದಾರ, ಮೋಜಣಿ, ತಾಲೂಕು, ಜಿಲ್ಲಾ ಮುಂತಾದ ಪದಗಳಂತೂ ಇದ್ದೇ ಇವೆ,
ಇನ್ನು ಅನೇಕರಿಗೆ ಗೊತ್ತಿಲ್ಲದ ತರಬೇತಿ, ಹಾದಿ, ಬಿಕನಾಸಿ, ತಿಜೋರಿ, ಮುಂತಾದ ಶಬ್ದಗಳೂ
ಪರ್ಷಿಯನ್ ನಿಂದ ಬಂದವು. ಇದೂ ಕೆಲವರಿಗೆ ಗೊತ್ತಿರಬಹುದು.
ಒಂದು ಸಲ ಒಬ್ಬರು ಕನ್ನಡ
ಹೋರಾಟಗಾರರು ಸಿಕ್ಕಿದ್ದರು. ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ಅಂತ ಕಾಣತ್ತೆ, ``ಗಾಂಚಾಲಿ ಬಿಡಿ
ಕನ್ನಡ ಮಾತಾಡಿ ಅನ್ನುವ ಗುಂಪು ತುಂಬ ಕೆಲಸ ಮಾಡುತ್ತಾ ಇದೆ. ಅವರಿಂದ ಹಿಂದಿ ವಿರೋಧಿ ಮೆಸೇಜು
ತುಂಬ ಚನ್ನಾಗಿ ಸರ್ಕುಲೇಟು ಆಗುತ್ತಾ ಇದೆ’’ ಎಂದರು. ಸಾರ್, ಗಾಂಚಾಲಿ ಅಂದರೆ ಏನು ಅಂತ ನಿಮಗೆ
ಗೊತ್ತಾ? ಅಂದೆ. ಗೊತ್ತಿರಲಿಲ್ಲ. ಅದು ಪರ್ಷಿಯನ್ ಭಾಷೆಯ ಎರಡು ಸುಕೋಮಲ ಶಬ್ದಗಳ ಸಂಗಮ (ಗಾಂಡ್
ಹಾಗೂ ಜಲಿ) ಎಂದು ಹೇಳಿದೆ. ಅವರಿಗೆ ನಂಬಲಿಕ್ಕೆ ಆಗಲಿಲ್ಲ. ಆದರೂ ನನ್ನ ಜೊತೆ ನಕ್ಕರು. ಆನಂತರ ಆ
ಶಬ್ದವನ್ನು ಅಷ್ಟೊಂದು ಬಳಸುತ್ತಿಲ್ಲ ಎಂದು ನನ್ನ ಸ್ನೇಹಿತರೊಬ್ಬರಿಗೆ ಹೇಳಿದರಂತೆ.
ಬೆಳಗಾವಿ ನಮ್ಮದು
ನಾವು ಸಣ್ಣವರಿದ್ದಾಗ ಬೆಳಗಾವಿ
ನಮ್ಮದು ಎಂದು ನಮ್ಮ ಊರಿನ ದ್ಯಾಮವ್ವನ ಗುಡಿ ಎದುರು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದರು. ಅದು ನಮ್ಮ ದಾದರೆ ಅದನ್ನು
ಯಾಕೆ ಬರೆಯಬೇಕು. ಅಲ್ಲವಾದರೆ ಅದನ್ನು ಬೆಳಗಾವಿಯಲ್ಲಿ ಬರೆಯಬೇಕೆ ಹೊರತು ನಮ್ಮೂರಲ್ಲಿ ಬರೆದು
ಏನು ಪ್ರಯೋಜನ, ಎಂದು ನಾನು ನಮ್ಮ ಅಜ್ಜನನ್ನು
ಕೇಳಿದ್ದು ನನಗೆ ನೆನಪು ಇದೆ. ಅವನು ಉತ್ತರವಾಗಿ ನಕ್ಕಿದ್ದೂ ನೆನಪು ಇದೆ.
ಬೆಂಗಳೂರನ್ನು ಬಿಟ್ಟರೆ, ರಾಜ್ಯದ
ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ನಿತ್ಯ ಹರಿತ್ ವರ್ಣ ಕಾಡು, ಅರೆ ಮಲೆನಾಡು ಹಾಗೂ ಬಯಲು
ಸೀಮೆ ಎಂಬ ಮೂರೂ ಭೂ ಪ್ರದೇಶಗಳು ಇವೆ. ಹುಬ್ಬಳ್ಳಿ-ಧಾರವಾಡ, ಬಿಜಾಪುರ, ಬೆಳಗಾವಿ, ಗುಲಬರಗಾ ,
ರಾಯಚೂರು, ಮುಂತಾದ ಉತ್ತರ ಕರ್ನಾಟಕದ ಎಲ್ಲ ಊರುಗಳಿಗಿಂತಲೂ ಅತಿ ದೊಡ್ಡ ನಗರ ಬೆಳಗಾವಿ.
ಮೈಸೂರಿನಂತೆಯೇ ಗಾಢ ಸಾಂಸ್ಕೃತಿಕ ವಾತಾವರಣ ಇರುವ, ಮಂಗಳೂರಿನಂತೆ ವ್ಯಾಪಾರ – ವ್ಯವಹಾರ
ಇರುವಂಥದು. (ಬೆಳಗಾವಿ ನನ್ನ ಊರಲ್ಲ. ನನ್ನ ಊರು ಹಾವೇರಿ ಜಿಲ್ಲೆಯ ಅಗಡಿ. ಮುಂಬಯಿ
ಕರ್ನಾಟಕದಲ್ಲಿ ಹುಟ್ಟಿದ ನಾನು ಈಗ ಕೆಲಸ ಮಾಡುತ್ತಿರುವುದು ಹೈದರಾಬಾದ್ ಕರ್ನಾಟಕದಲ್ಲಿ.)
ಮುಂಬಯಿ ಕರ್ನಾಟಕ ಅಥವಾ
ಹೈದೆರಾಬಾದು ಕರ್ನಾಟಕದ ಹಿಂದುಳಿಯುವಿಕೆಗೆ ಹಳೇ ಮೈಸೂರಿನವರು ಅಥವಾ ಕರಾವಳಿ ಯವರು ಕಾರಣ ಅಂತ
ನಾನು ನಂಬುವುದಿಲ್ಲ. ಹಾಗೆ ಹೇಳುವುದೂ ಇಲ್ಲ. ಈ ಪ್ರದೇಶಗಳು ಅಥವಾ ಇತರ ಹಿಂದುಳಿದ ಪ್ರದೇಶಗಳು
ಹಿಂದುಳಿಯುವುದಕ್ಕೆ ಅಯಾ ಪ್ರದೇಶದ ನಾಯಕರು ಹಾಗೂ ಅಲ್ಲಿನ ಮತದಾರರು ಕಾರಣ.
ಈ ಹಿನ್ನೆಲೆಯಲ್ಲಿ ಬೆಳಗಾವಿಯ
ಉದಾಹರಣೆ ತೆಗೆದುಕೊಳ್ಳೋಣ. ಅದನ್ನು ನಾವು ತನ್ನಷ್ಟಕ್ಕೆ ತಾನು ಬೆಳೆಯಲು ಬಿಟ್ಟಿದ್ದರೆ ಅದು
ಮಹಾನಗರವಾಗಿ ಬೆಳೆಯುತ್ತಿತ್ತು. ಈಗ ಇರುವುದಕ್ಕಿಂತ ಹೆಚ್ಚು ಶಾಲೆ, ಕಾಲೇಜು ಗಳನ್ನು
ಹೊಂದಿರುತ್ತಿತ್ತು. ಉದ್ಯೋಗ ಗಳನ್ನು ಸೃಷ್ಟಿಸುತ್ತಿತ್ತು. ನನ್ನಂತಹ ಅನೇಕ ಬರಗಾಲದ ಮಕ್ಕಳನ್ನು
ಹೊಟ್ಟೆಯಲ್ಲಿ ಇಟ್ಟು ಕೊಂಡು ಸಲಹುತ್ತಿತ್ತು. ಹೊಟ್ಟೆ ಪಾಡಿಗೆ ಓದಿದವರು ಬಾಂಬೆ, ಬೆಂಗಳೂರಿಗೆ,
ಓದಲಾರದವರು ಮಡಿಕೇರಿ-ಚಿಕ್ಕಮಗಳೂರಿನ ಕಾಫಿ ಸೀಮೆಗೆ, ಮಂಗಳೂರು- ಉಡುಪಿಯ ಬೀಡಿ ಸೀಮೆಗೆ
ಹೋಗುವುದು ಸ್ವಲ್ಪವಾದರೂ ತಪ್ಪುತ್ತಿತ್ತು.
ಆದರೆ, ಕೆಲವು ಅವಕಾಶವಾದಿ ರಾಜಕೀಯ
ನಾಯಕರು ಹಾಗೂ ಮಾರುಕಟ್ಟೆ ಯ ಮೇಲೆ ಕಣ್ಣಿಟ್ಟಿರುವ ಕೆಲವು ಪತ್ರಿಕೆಗಳ ಸಂಪಾದಕರಿಂದಾಗಿ ಬೆಳಗಾವಿ
ಯ ಹೊಟ್ಟೆಗೆ ಬೆಂಕಿ ಬಿತ್ತು. ದಶಕಗಳು ಇಲ್ಲಿ ಆತಂಕವಿತ್ತು. ಹತ್ತು- ಹದಿನೈದು ವರ್ಷವಂತೂ ಕರ್ಫ್ಯೂ
ಇದ್ದಂತೆ ಇತ್ತು. ಆಡಳಿತಗಾರರಿಗೆ ತಲೆನೋವು ಆಗುವಂತೆ, ಬಂಡವಾಳ ಹೂಡುವವರು ಹೆದರುವಂತೆ, ಇತರ
ಜಿಲ್ಲೆಗಳ ಜನ ಅದನ್ನು ಮನಸ್ಸಿನಿಂದ ತೆಗೆದು ಹಾಕುವಂತೆ, ಅಲ್ಲಿಗೆ ವರ್ಗವಾದ ಸರಕಾರಿ
ಅಧಿಕಾರಿಗಳು ಅದನ್ನು ಕ್ಯಾನ್ಸಲ್ಲು ಮಾಡಲು ವಿಧಾನಸೌದಕ್ಕೆ ಹೋಗಿ ಚಪ್ಪಲಿ ಸವೆಸುವಂತೆ, ಅದರ
ಇಮೇಜು ಬೆಳೆಯಿತು.
ಎಮ್ಮೆಲ್ಲೆ ಎಂಪಿಗಳು ಜನರ ಕೆಲಸ
ಮಾಡದೇ, ಅಭಿವೃದ್ಧಿ ಯ ಬಗ್ಗೆ ಚಿಂತನೆ ಮಾಡದೇ, ಕೇವಲ
ಘೋಷಣೆ ಕೂಗತೊಡಗಿದರು. ರಸ್ತೆ, ಗಟಾರ ಸ್ವಚ್ಛ ಮಾಡದೇ, ಹಳ್ಳಿಗಳಲ್ಲಿ ಶಾಲೆ ತೆರೆಯದೇ,
ಶಹರದಲ್ಲಿ ಕಾರಖಾನೆ ಆರಂಭಿಸದೇ, ಕೇವಲ ಕರ್ನಾಟಕ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ,
ಆಯೋಜಿಸುವುದರಲ್ಲಿಯೇ ಪ್ರತಿಷ್ಠೆ ತೋರಿಸತೊಡಗಿದರು. ಅವರನ್ನು ಅಲ್ಲಿಗೆ ಕಳಿಸಿದ ಮತದಾರ ಮಹಾಜನರೂ
ಸಹ ಚಪ್ಪಾಳೆ ತಟ್ಟಿದರು, ಬಹು ಪರಾಕು ಕೂಗಿದರು. ಭಾಷಾಭಿಮಾನ ಎನ್ನುವುದು ಬಹಳ ಸೂಕ್ಷ್ಮ
ವಿಷಯವಾದ್ದರಿಂದ ಯಾವ ಸರಕಾರವೂ ನಿಷ್ಠುರವಾದ ನಿರ್ಧಾರ ತೆಗೆದುಕೊಳ್ಳದೇ ಇರುವಂತೆ ಆಯಿತು. ನಿಷ್ಕಲ್ಮಶ
ಮನಸ್ಸಿನ ಸಣ್ಣ ಮಕ್ಕಳು ಬೇರೆ ಭಾಷೆ ಮಾತಾಡುವ ಮಕ್ಕಳನ್ನು ದ್ರೋಹಿಗಳಂತೆ, ವಿರೋಧಿಗಳಂತೆ ನೋಡುವ
ಹೊತ್ತು ಬಂತು.
ಅಷ್ಟೆಲ್ಲ ಕಿರಿಕಿರಿಗೆ ಕಾರಣವಾದ ಎಂ
ಈ ಎಸ್ ಎನ್ನುವ ಪಕ್ಷ ಮಹಾರಾಷ್ಟ್ರದ ಲ್ಲಿ, ಅಥವಾ ಆ ರಾಜ್ಯದ ಗಡಿ ಹೊಂದಿರುವ ಕರ್ನಾಟಕದ ಇತರ
ಯಾವುದೇ ಜಿಲ್ಲೆಗಳಲ್ಲಿ ಇಲ್ಲ ವೆನ್ನುವದು ಅನೇಕರಿಗೆ ಗೊತ್ತಿಲ್ಲ. ಅವರು ಕೂಗಲು ಆರಂಭಿಸಿದಾಗ
ಅವರಿಗಿಂತ ಜೋರಾಗಿ ಕೂಗುತ್ತೇವೆ. ಇಂಡಿಯಾ
ಹ್ಯಾಸ್ ಗಾಟ್ ಟ್ಯಾಲೆಂಟ ನಲ್ಲಿ ಸೋತು ಹೊರಬಂದರೂ ಟೀವಿಯಲ್ಲಿ ಅರೆ ಕ್ಷಣ ಕಂಡ ಖುಷಿಗೆ ಪಾಯಸ
ಮಾಡಿ ಪಕ್ಕದ ಮನೆಯವರಿಗೆ ಕೊಟ್ಟಂತೆ ಸಂತೋಷ ಪಡುತ್ತೇವೆ.
ನೀವು ಕೇಳಿರದ ಸ್ಟೋರಿ
ಉತ್ತರದ 13 ಜಿಲ್ಲೆಗಳಲ್ಲಿ ನಾಲ್ಕಕ್ಕೆ
ಮಹಾರಾಷ್ಟ್ರ ದ ಗಡಿ ಇದೆ. ಉಳಿದವುಗಳಲ್ಲಿ ಮರಾಠಿ- ಮಹಾರಾಷ್ಟ್ರದ ಸಂಸ್ಕೃತಿಯ ಪ್ರಭಾವ ವಿದೆ.
ಮರಾಠಿ ಮಾತಾಡುವ ಜನ, ಮರಾಠಾ ಜಾತಿಯ ಜನ ಹೇರಳವಾಗಿ ಇದ್ದಾರೆ. ಆದರೆ ಎಂಈಎಸ್ ಇಲ್ಲ. ಒಬ್ಬಿಬ್ಬ
ಸಣ್ಣ ಪುಟ್ಟ ನಾಯಕರು ಇದ್ದರೂ, ಅವರು ಗದ್ದಲ ಮಾಡುವುದಿಲ್ಲ. ಅವರ ತಂತ್ರಗಳಿಗೆ ಜನ ಸೊಪ್ಪು
ಹಾಕುವುದಿಲ್ಲ . ಯಾಕೆ? ಯಾಕೆಂದರೆ ಬೀದರ್,
ಗುಲಬರಗಾ, ಯಾದಗಿರಿ, ರಾಯಚೂರು, ಕೊಪ್ಪಳ ಮುಂತಾದವುಗಳಲ್ಲಿ ಮಾರುಕಟ್ಟೆ ಯ ಭಾಷೆ ಉರ್ದು. ಅದನ್ನು
ಮೈಸೂರು ಸಂಸ್ಥಾನದ ಹೆಮ್ಮೆಯ ಪುತ್ರರಿಗೆ ಹೀಗೆ ಹೇಳಬಹುದು- ``ಉರ್ದು ಎನ್ನಿ, ಹಿಂದೀ, ಎನ್ನಿ,
ದಖನಿ ಎನ್ನಿ, ಹಿಂದೂಸ್ತಾನಿ ಎನ್ನಿ, ಒಂದೇ, ಅದೊಂದೇ”. ತಮ್ಮ ಮನೆಯಲ್ಲಿ ಹೊಟ್ಟೆ ತುಂಬ ಮಾತೃ
ಭಾಷೆ ಮರಾಠಿ ಮಾತಾಡುವ ಇಬ್ಬರು ರಸ್ತೆಯಲ್ಲಿ ಭೇಟಿ ಯಾದರೂ ಅವರು ಮಾತನಾಡುವುದು ಉರ್ದು ಭಾಷೆಯನ್ನೇ.
ಇದರಿಂದ ಆದ ಲಾಭ ಏನೆಂದರೆ, ಕನ್ನಡ
ನಮ್ಮದು, ಮರಾಠಿ ಅವರದು, ನಾವು ಬೇರೆ, ಅವರು ಬೇರೆ, ನಮ್ಮದು ಶ್ರೇಷ್ಟ, ಅವರದು ಕನಿಷ್ಠ ಎಂದು
ಯಾರಿಗೂ ಎಂದೂ ಅನಿಸಲಿಲ್ಲ. ಎಲ್ಲಾ ಬಿಟ್ಟು ಭಾಷೆಯ ವಿಷಯಕ್ಕೆ ಹೊಡೆದಾಡುವಂಥ ಪರಿಸ್ಥಿತಿ ನಮಗೆ
ಬರಲಿಲ್ಲ. ಅವರವರು ಅವರವರ ಮನೆಯಲ್ಲಿ ಏನು ಮಾತಾಡಿದರೂ, ಮನೆ ಬಿಟ್ಟು ಹೊರ ಬಂದಾಗ ಎಲ್ಲರೂ
ಮಾತಾಡುವುದು ಕನ್ನಡ, ಮರಾಠಿ, ತೆಲುಗು, ಹಿಂದಿ ಮಿಶ್ರಿತ ಉರ್ದು ಭಾಷೆಯಲ್ಲಿ. ಅದು ನಮ್ಮನ್ನು
ಒಂದಾಗಿಸುವ ಕೊಂಡಿ. ಅದು ಉತ್ಪ್ರೇಕ್ಷೆ ಅಲ್ಲ.
ಪರಿಸ್ಥಿತಿ ಹೀಗೆ ಇದ್ದದ್ದಕ್ಕೆ ``ನಾವೆಲ್ಲ
ಸೇರಿ ಈ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸೋಣ’’
ವೆನ್ನುವ ವಾದಕ್ಕೆ ಇಲ್ಲಿ ಬೆಲೆ ಸಿಗಲಿಲ್ಲ. ``ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ’’
ಎನ್ನುವುದಕ್ಕೆ ಸಿಕ್ಕಿತು. ``ಮರಾಠಿ ಆಡಳಿತ ಭಾಷೆ ಅಲ್ಲ’’ ಎನ್ನುವ ವಾದಕ್ಕಿಂತ ನಮ್ಮ ಮನೆಯಲ್ಲಿ
ನೀರಿಲ್ಲ, ``ನಮ್ಮ ಊರಿಗೆ ರಸ್ತೆ ಇಲ್ಲ’’ ಎನ್ನುವುದೇ ದೊಡ್ಡ ದಾಯಿತು. ಇದನ್ನು ಜೋರಾಗಿ
ಹೇಳಬೇಕಿಲ್ಲ. ಬೆಳಗಾವಿಯಿಂದ ಬರುವ ಕೂಗಿಗೂ, ಉತ್ತರದ ಇತರ ಜಿಲ್ಲೆಗಳಿಂದ ಬರುವ ಕೂಗಿಗೂ
ವ್ಯತ್ಯಾಸ ವಿದೆ ಎನ್ನುವುದು ದಕ್ಷಿಣ ಕರ್ನಾಟಕದ ಜನರಿಗೆ ಚೆನ್ನಾಗಿ ಗೊತ್ತಿದೆ.
ನಮ್ಮ ಬೀದರಿನಲ್ಲಿ ಕನ್ನಡಿಗರು
ಮಾತಾಡುವ ಭಾಷೆಯ ಬಗ್ಗೆ ಇನ್ನೊಂದು ಜೋಕು ಇದೆ. ಹಿರಿಯರೊಬ್ಬರು ದವಾಖಾನೆಗೆ ಹೋದಾಗ ಡಾಕ್ಟರು
ಇರಲಿಲ್ಲವಂತೆ. ಅವರು ಕಾಯಬೇಕಾಯಿತು. ಅದನ್ನು ಅವರು ಹೀಗೆ ವರ್ಣಿಸುವುದು `` ನಾವರೇ ಗ್ಯಾರಾ ಬಜೇ
ಹೋಗಿದ್ವಿ, ಡಾಕ್ಟರ್ ಸಾಬ್ ಬಾರಾ ಬಜೆ ಬಂದರು. ಏಕ್
ಘಂಟಾ ಬರಬಾದ್’ ಆತು’’.
ಅದಕ್ಕೊಂದು ಜೋಕು ಇದೆ. ಬೀದರ್
ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮುನ್ನ ಮುಖ್ಯಮಂತ್ರಿಯಾಗಿದ್ದವರು ಧರಂ ಸಿಂಗ್.
ಸಮ್ಮೇಳನಕ್ಕೆ ಹೆಚ್ಚಿನ ಹಣ ಕೇಳಲು ಇಲ್ಲಿನ ಶಾಸಕರಾದ ಗುರುಪಾದಪ್ಪ, ಬಂಡೆಪ್ಪ ಕಾಶೆಂಪುರ,
ಬಸವರಾಜ ಪಾಟೀಲ ಹುಮನಾಬಾದ್ ಮುಂತಾದವರು ಹೋಗಿದ್ದರಂತೆ. ``ಪಿಛಲೆ ಸಾಲ್ ಸೇ ಜ್ಯಾದಾ ದೇನಾ ಸಾಬ್,
ಧೂಮ್ ಧಾಮ್ ಸೆ ಮನಾಯೇಂಗೆ ಸಾಬ್, ಇಸ್ಕೋ ಬುಲಾಯೇಂಗೆ, ಉಸಕೋ ಬುಲಾಯೇಂಗೆ,’’ ಅಂತ ಮೀಟಿಂಗ್
ತುಂಬೆಲ್ಲ ಉರ್ದು ಮಾತಾಡಿದರಂತೆ. ಅಲ್ಲಿಯೇ ಇದ್ದ
ಬಸವರಾಜ ಬೊಮ್ಮಾಯಿ ಅವರು `` ಅಪ್ಪಾ ಕನಿಷ್ಟ ಈ ಮೀಟಿಂಗ್ ನಲ್ಲಿ ಆದರೂ ಕನ್ನಡ ಮಾತಾಡಿ ಪುಣ್ಯ
ಕಟ್ಟಿಕೊಳ್ಳಿ ಎಂದು ಹೇಳಿ ನಕ್ಕರಂತೆ.
ಕನ್ನಡಿಗರ ಮನೆಯಲ್ಲಿ ಕೆಲಸ ಮಾಡುವ
ಕನ್ನಡಿಗರು ರಜೆ ಕೇಳುವುದು ಹೀಗೆ -`` ಸಾಬರೇ, ಕಲ್ ಹಮಾರ್ ಘರ್ ಮೇ ಗಣಪತೀ ಕಾ ಈದ್ ಹೈ ಜೀ. ಎಕ್
ದಿನ ಛುಟ್ಟೀ ದೇದೋ. ಮತ್ತೆ ನಾಳಿದ್ದು ಬರತೇನಿ,’’. ``ಗಣಪತಿ ಕಾ ಈದ್’’ ಎನ್ನುವುದು ನಮ್ಮ
ಮಣ್ಣಿನ ಮಾತು. ನಮ್ಮ ಹೃದಯದ ಅಗಲವನ್ನು ಬಿಚ್ಚಿ ತೋರಿಸುವಂತಹದ್ದು.
ಇನ್ನು ನಮ್ಮೆಲ್ಲರ ಬೆನ್ನ ಹಿಂದಿನ
ಬೆಳಕು ತೋರಿದ ಶಾಂತರಸರು ಹಮದರ್ದ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರು ಉರ್ದು- ಕನ್ನಡದ
ನಡುವಿನ ಅಪರೂಪದ ಸೇತುವೆಯಾಗಿದ್ದರು.
ಈ ಪ್ರದೇಶದ ಅನೇಕ ನಾಯಕರು
ಓದಿದ್ದು ಉರ್ದು ಮಾಧ್ಯಮದಲ್ಲಿ. ಡಾ. ಮಲಕರರೆಡ್ಡಿ ಅವರು ಉರ್ದು ವಿನಲ್ಲಿ ವೈದ್ಯ ವಿಜ್ಞಾನ
ಅಭ್ಯಾಸ ಮಾಡಿದ್ದರೆ, ಭೀಮಣ್ಣಾ ಖಂಡ್ರೆ, ಮಲ್ಲಿಕಾರ್ಜುನ ಖರ್ಗೆ ಯಂಥವರ ಕಾನೂನು ಶಿಕ್ಷಣ ಉರ್ದು
ವಿನಲ್ಲಿ. ಇಂತಹವರು ಸಾವಿರ. ಇವರೆಲ್ಲ ಭುವನೇಶ್ವರಿ ಯ ಪ್ರಭಾವಳಿಯ ಬಣ್ಣಗಳನ್ನು ಹೆಚ್ಚು
ಗಾಢವಾಗಿಸಿದವರೇ ಹೊರತು, ಅಳಿಸಲಿಲ್ಲ.
`ತುಂಬಾ ರಫ್ಪು’
`ನಿಂ ಕನ್ನಡ ತುಂಬಾ ರಫ್ಫು,
ನಮ್ಮದಾದರೆ ತುಂಬಾ ಸಾಫ್ಟು,’ ಎಂದು ದಕ್ಷಿಣದ ಅನೇಕ ಗೆಳೆಯರು ನನಗೆ ಹೇಳಿದ್ದಾರೆ. ಹೌದು,
ನಾವಿದ್ದಂಗೆ ನಂ ಭಾಷೆ, ಅಲ್ಲವಾ, ಅಂತ ನಾನು ಹೇಳಿ ನಕ್ಕಿದ್ದು ಉಂಟು.
ಕೆಲವರ ಮನೆಯಲ್ಲಂತೂ ``ನಿಂ ಭಾಷೆ
ಮಾತಾಡಿ ಸ್ವಲ್ಪ’’ ಎಂದು ಹೇಳಿ ನನ್ನ ಹತ್ತಿರ
ಮಾತಾಡಿಸಿ, ಅದನ್ನು ಕೇಳಿ ಕಣ್ಣಲ್ಲಿ ನೀರು ಬರುವಂತೆ ನಕ್ಕು ನನ್ನ ಮುಖವನ್ನೊಮ್ಮೆ ನೋಡಿ ``ನಿಂ
ಭಾಷೆ ನನಗಿಷ್ಟ’’ ಎಂದು ಹೇಳಿದ್ದು ಇದೆ. ನಾನು ಪೆಕರು ಪೆಕರಾಗಿ ``ಅದು ನಂ ಭಾಷೆ ಅಲ್ಲ. ಅದು
ಕನ್ನಡ’’ ಅಂತ ಹೇಳಿದ್ದೇನೆ.
ಉತ್ತರ ಕರ್ನಾಟಕದ ಜನ ಕನ್ನಡ ವನ್ನು
ತುಂಬ ಪ್ರೀತಿಸುತ್ತಾರೆ. ಬೆಂಗಳೂರಿನವರಷ್ಟು ಛಲೋ
ಕನ್ನಡ ನಮಗೆ ಬರೋದಿಲ್ಲ ಎಂದು ವಿನಮ್ರವಾಗಿ, ಕೊಂಚ ಹಿಂಜರಿಕೆಯಿಂದ ಹೇಳಿಕೊಳ್ಳುತ್ತಾರೆ. ಕನ್ನಡ
ನಾಡಿನ ಹಿತರಕ್ಷಣೆಯ ವಿಚಾರ ಬಂದಾಗ ಹೋರಾಟ, ಪ್ರತಿಭಟನೆ, ಬಂದು, ಎಲ್ಲವನ್ನೂ ಮಾಡುತ್ತಾರೆ.
ದಕ್ಷಿಣ ಕರ್ನಾಟಕದ ಬೆರಳೆಣಿಕೆಯಷ್ಟು ಜಿಲ್ಲೆಗಳಿಗೆ ನೀರುವ ಉಣಿಸುವ ಕಾವೇರಿ ವಿಷಯವಾಗಿ ಬೀದರು
ಬಂದಾಗಿದೆ. 10 ಜಿಲ್ಲೆಗಳಿಗೆ ನೀರು ನೀಡಬಹುದಾದ ಕೃಷ್ಣಾ ನೀರಿಗಾಗಿ ಬೆಂಗಳೂರಿನಲ್ಲೆ ಎಷ್ಟುಸಾರಿ
ಹೋರಾಟ ನಡೆದಿದೆ? ಗೋದಾವರಿ ಕಣಿವೆಯ 24 ಟಿಎಂಸಿ ನೀರು ಕರ್ನಾಟಕಕ್ಕೆ ಬರಬೇಕಾಗಿದೆ ಎನ್ನುವ ವಿಷಯ
ರಾಜಧಾನಿಯ ಎಷ್ಟು ಕನ್ನಡ ಹೋರಾಟಗಾರರಿಗೆ ಗೊತ್ತಿದೆ?
ಬಿರುಬೇಸಿಗೆಯಲ್ಲಿ ಚೆನ್ನೈ,
ದೆಹಲಿ, ಮುಂಬೈನ ಏರುತ್ತಿರುವ ತಾಪಮಾನಗಳನ್ನು ತೋರಿಸಿ, ನಂ ಬೆಂಗಳೂರು ತಂಪಾಗಿದೆ. ಅದಕ್ಕೇ ಐ
ಲವ್ ಬೆಂಗಳೂರು ಅಂತ ಫೇಸುಬುಕ್ಕು ಪೋಸ್ಟುಗಳನ್ನು ಹಾಕುವ ಕನ್ನಡಿಗರು ರಾಜ್ಯದ ಇತರ ಜಿಲ್ಲೆಗಳ
ಹವಾಮಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆಯೇ? ಬೆಂಗಳೂರಿನ ಗಿಂತ ಕೂಲ್ ಸ್ಥಳಗಳು ರಾಜ್ಯದಾದ್ಯಂತ
ಹರಡಿಕೊಂಡಿವೆ. ಅವು ಕೇವಲ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಇಲ್ಲ, ಉತ್ತರ ಕರ್ನಾಟಕದ
ಬೆಳಗಾವಿ, ಸೊಂಡೂರು, ಕುಷ್ಟಗಿ, ಬೀದರ್, ಹುಮ್ನಾಬಾದು, ಗೊಟ್ಟಂಗೊಟ್ಟಾ ದಂತಹ ಊರುಗಳಲ್ಲಿಯೂ
ಇಂತಹ ವಾತಾವರಣ ಇರಬಹುದು ಎಂಬುದು ಅವರ ಗಮನಕ್ಕೆ ಬಂದಿಲ್ಲವೇ?
ಉತ್ತರ ಕರ್ನಾಟಕ ಹಾಗೂ ಹೈದರಾಬಾದ
ಕರ್ನಾಟಕದ ಅಸಂಖ್ಯ ಊರುಗಳಲ್ಲಿ ಬೇರೆ ಬೇರೆ ಮಾತಾಡುವ ಜನ ಅಣ್ಣ ತಮ್ಮಂದಿರಂತೆ ಇದ್ದಾರೆ
(ಮಂಗಳೂರಿನಲ್ಲಿ ವಿವಿಧ ಭಾಷೆಯ ಜನ ಹೊಂದಿಕೊಂಡು ಇರುವಂತೆ). ಈ ಊರು ಗಳನ್ನು ಇನ್ನೊಂದು
ಬೆಳಗಾವಿಯನ್ನಾಗಿ ಮಾಡುವ ವಿಚಾರ ಇದ್ದರೆ ಹಿಂದಿ ಹೇರಿಕೆ ಯ ವಿರುದ್ಧ ಮಾತಾಡುವುದು ಒಳಿತು.
``ಒಂದೇ, ಒಂದೇ, ಒಂದೇ
ಕರ್ನಾಟಕವೊಂದೇ,’’ ಎಂದು ಭಾವಾವೇಶ ದಿಂದ ಚೀರಾಡಿದರೆ ಕರುನಾಡು ಒಂದಾಗದು. ಕನ್ನಡ ನಾಡಿನ
ಜನರೆಲ್ಲಾ ಒಂದೇ ಎಂದು ಒಪ್ಪಿಕೊಂಡು ಸಹೋದರ ಭಾವದಿಂದ ಇದ್ದಾಗ ಮಾತ್ರ ಸಾಧ್ಯವಾದೀತು. ಇದು ತೀವ್ರ
ಆಸಕ್ತಿ, ಪರಸ್ಪರರ ಬಗ್ಗೆ ಮಾಹಿತಿ ಹಾಗೂ ಸೌಹಾರ್ದಯುತ ಸಂವಹನ ದಿಂದ ಮಾತ್ರ ಸಾಧ್ಯ. ಅಲ್ಲಮ
ಹೇಳಿದಂತೆ ಈ ಮಾತು ಹೇಳುವವರಿಗೆ ಎಷ್ಟೋ ಅಷ್ಟೇ ಕೇಳುವವರಿಗೂ ಅನ್ವಯಿಸುತ್ತದೆ.